ನವದೆಹಲಿ, ಏ.12 (DaijiworldNews/MB) : ದೇಶದಲ್ಲಿ ಸ್ವದೇಶಿ ಕೊರೊನಾ ಲಸಿಕೆಗಳಾದ ಕೋವಿಶೀಲ್ಡ್, ಕೋವಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ ನೀಡಿದ ಬಳಿಕ ಇದೀಗ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ತುರ್ತು ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ.
ಮಾಸ್ಕೋದಲ್ಲಿರುವ ಸೆಚನೋವ್ ವಿವಿಯ ಗಮಾಲಿಯಾ ಸಂಶೋಧನಾ ಕೇಂದ್ರ ಮತ್ತು ರಷ್ಯಾ ರಕ್ಷಣಾ ಸಚಿವಾಲಯ ಅಭಿವೃದ್ದಿ ಪಡಿಸಿದ ವಿಶ್ವದ ಮೊದಲ ಕೊರೊನಾ ವಾಕ್ಸಿನ್ ಆದ ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾ 2020ರ ಆಗಸ್ಟ್ನಲ್ಲಿ ಬಿಡುಗಡೆ ಮಾಡಿತ್ತು. ಭಾರತದಲ್ಲಿ ಜನರ ಮೇಲೆ ಇದರ ಪ್ರಯೋಗವನ್ನು ಡಾ| ರೆಡ್ಡೀಸ್ ಕಂಪನಿ ನಡೆಸುತ್ತಿದ್ದು ತುರ್ತು ಬಳಕೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಇದೀಗ ಡಿಸಿಜಿಐ ಈ ಲಸಿಕೆ ತುರ್ತು ಬಳಕೆಗೆ ಅನುಮೋದನೆ ನೀಡಿದೆ.
ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಈಗಾಗಲೇ ಅನುಮತಿ ನೀಡಲಾಗಿದ್ದು ಆ ಲಸಿಕೆಯನ್ನು ಪ್ರಸ್ತುತ 45 ವರ್ಷ ಮೇಲ್ಪಟ್ಟ ಜನರಿಗೆ ನೀಡಲಾಗುತ್ತಿದೆ. ಆದರೆ ಪ್ರಸ್ತುತ ಈ ಲಸಿಕೆಗಳ ಕೊರತೆ ಕಾಣಿಸಿಕೊಂಡಿದೆ.
ಏತನ್ಮಧ್ಯೆ ಸ್ಪುಟ್ನಿಕ್ ಲಸಿಕೆ ಭಾರತದಲ್ಲಿ ಅನುಮತಿ ದೊರೆತಿರುವುದು ಲಸಿಕೆ ಅಭಿಯಾನಕ್ಕೆ ಹುಮ್ಮಸ್ಸು ತುಂಬಿದೆ. ಇನ್ನು ಹೈದರಾಬಾದ್ನ ಡಾ| ರೆಡ್ಡೀಸ್ ಲ್ಯಾಬೋರೇಟರಿ, ಹೆಟೆರೊ ಬಯೋಫಾರ್ಮಾ, ಗ್ಲಾಂಡ್ ಫಾರ್ಮಾ, ಸ್ಟೆಲಿಸ್ ಬಯೋಫಾರ್ಮಾ ಹಾಗೂ ವಿಕ್ರೋ ಬಯೋಟೆಕ್ ಕಂಪನಿಗಳಲ್ಲಿ ಈಗಾಗಲೇ ಸ್ಪುಟ್ನಿಕ್ ಲಸಿಕೆಯನ್ನು ತಯಾರಿಸಲಾಗುತ್ತಿದ್ದು ವರ್ಷಕ್ಕೆ 85 ಕೋಟಿ ಸ್ಪುಟ್ನಿಕ್ ಲಸಿಕೆಯನ್ನು ತಯಾರಿಸುವ ಸಾಮರ್ಥ್ಯ ಭಾರತದ ವಿವಿಧ ಘಟಕಗಳಿಗಿದೆ ಎಂದು ವರದಿಯಾಗಿದೆ.
ಇನ್ನು ಈ ಲಸಿಕೆಯೂ ಸಮೃದ್ಧವಾಗಿ ಪ್ರತಿಕಾಯಗಳ ಉತ್ಪತ್ತಿಗೆ ಸಹಾಯ ಮಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕಗೊಳಿಸಿ ಸೋಂಕು ನಿಯಂತ್ರಣಕ್ಕೆ ತರಲು ಸಹಕಾರಿಯಾಗುತ್ತದೆ ಎಂದು ವರದಿಯಾಗಿದೆ. ಹಾಗೆಯೇ ಸರ್ಕಾರ ಇನ್ನು ಜಾನ್ಸನ್ ಅಂಡ್ ಜಾನ್ಸನ್, ನೋವಾವಾಕ್ಸ್, ಜೈಡಸ್ ಕ್ಯಾಡಿಲಾ ಹಾಗೂ ಇಂಟ್ರಾನೇಸಲ್ (ಮೂಗಿನ ಮೂಲಕ ತೆಗೆದುಕೊಳ್ಳುವ) ಲಸಿಕೆಗೂ ಅನುಮತಿ ನೀಡುವ ಸಾಧ್ಯತೆಗಳಿವೆ.