ಕೋಲ್ಕತ್ತ, ಏ.12 (DaijiworldNews/MB) : ದೀದಿ ಇನ್ನಿಂಗ್ಸ್ ಮುಗಿದಿದೆ, ಅವರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಪಶ್ಚಿಮ ಬಂಗಾಳದ ಜನರು ಈಗಾಗಲೇ ಸಾಕಷ್ಟು ಬೌಂಡರಿ ಹಾಗೂ ಸಿಕ್ಸರ್ಗಳನ್ನು ಬಾರಿಸಿದ್ದು ಬಿಜೆಪಿ ಈಗಾಗಲೇ ಶತಕ ಗಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬರ್ಧಮಾನ್ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ''ಟಿಎಂಸಿ ಸೋಲು ಖಚಿತ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಇನ್ನಿಂಗ್ಸ್ ಮುಗಿದಿದೆ. ಪಶ್ಚಿಮ ಬಂಗಾಳದ ಜನರು ಅವರನ್ನು ನಂದಿಗ್ರಾಮದಲ್ಲಿ ಕ್ಲೀನ್ ಬೌಲ್ಡ್ ಮಾಡಿದ್ದಾರೆ'' ಎಂದು ಟಾಂಗ್ ನೀಡಿದ್ದಾರೆ. ಇನ್ನು, ''ಜನರು ದೀದಿಯ ಇಡೀ ತಂಡವೇ ಮೈದಾನದಿಂದ ಹೊರಹೋಗಲು ಸೂಚನೆ ನೀಡಿದ್ದಾರೆ'' ಎಂದು ಮೋದಿ ಹೇಳಿದ್ದಾರೆ.
''ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಕೇಂದ್ರದ ಪಡೆಗಳ ವಿರುದ್ಧ ಜನರನ್ನು ಪ್ರಚೋದಿಸಿದ್ದಾರೆ'' ಎಂದು ಆರೋಪಿಸಿರುವ ಪ್ರಧಾನಿ, ''ಕೂಚ್ ಬಿಹಾರ್ನಲ್ಲಿ ನಡೆದ ಘರ್ಷಣೆಗೆ ಮಮತಾ ಅವರ ಪ್ರಚೋದನೆಯೇ ಕಾರಣ'' ಎಂದರು.
ಇನ್ನು, ''ನಿಮ್ಮ ನೀತಿಗಳು ಅಸಂಖ್ಯಾತ ಮಕ್ಕಳ ಜೀವನವನ್ನೇ ಕಸಿದುಕೊಂಡಿದೆ'' ಎಂದು ಕೂಡಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ ಪ್ರಧಾನಿ ನರೇಂದ್ರ ಮೋದಿ ಅವರು ಆರೋಪ ಮಾಡಿದರು.