ಬೆಂಗಳೂರು, ಏ.12 (DaijiworldNews/HR): "ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾಗಿರುವ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಉಲ್ಟಾ ಹೇಳಿಕೆ ನೀಡಿದ್ದು, ಇಡೀ ಪ್ರಕರಣ ಹೊಸ ತಿರುವು ಪಡೆದಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಸುದ್ದಿ ಸುಳ್ಳು" ಎಂದು ಯುವತಿ ಪರ ವಕೀಲ ಕೆ.ಎನ್. ಜಗದೀಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಸ್ಐಟಿ ಮುಂದೆ ಹಾಜರಾದ ಯುವತಿ ಯಾವುದೇ ಉಲ್ಟಾ ಹೇಳಿಕೆ ನೀಡಿಲ್ಲ. ಆರೋಪಿ ಪ್ರಭಾವಿಯಾಗಿರುವುದರಿಂದ ಇಂತಹ ಸುದ್ದಿ ಹರಡುತ್ತಿದ್ದು, ಈ ರೀತಿಯ ಸುದ್ದಿಗಳಿಗೆ ಮಹತ್ವ ಕೊಡಬೇಕಾಗಿಲ್ಲ" ಎಂದರು.
ಇನ್ನು ಇದೇ ವೇಳೆ ಮಾತನಾಡಿರುವ ಮತ್ತೋರ್ವ ವಕೀಲ ಸೂರ್ಯ ಮುಕುಂದರಾಜ್, "ಸಿ.ಡಿ ಯುವತಿ ಎಸ್ಐಟಿ ಮುಂದೆ ಇಂದು ಯಾವುದೇ ಹೇಳಿಕೆಯನ್ನೇ ನೀಡಿಲ್ಲ ಎಂದ ಮೇಲೆ ಉಲ್ಟಾ ಹೇಳಿಕೆ ಎಲ್ಲಿಂದ ಬಂತು? ಪ್ರಕರಣದ ಬಗ್ಗೆ ಹೆಚ್ಚಿನ ಸಾಕ್ಷ್ಯ ಒದಗಿಸಲು ಮಾತ್ರ ಅಧಿಕಾರಿಗಳ ಮುಂದೆ ಯುವತಿ ಹಾಜರಾಗಿದ್ದಾಳೆ. ನಾನೂ ಕೂಡ ಸಧ್ಯ ಎಸ್ಐಟಿ ಮುಂದೆಯೇ ಇದ್ದೇನೆ" ಎಂದು ಹೇಳಿದ್ದಾರೆ.