ನವದೆಹಲಿ, ಏ.12 (DaijiworldNews/MB) : ಕುರಾನ್ನಲ್ಲಿರುವ 26 ಸಾಲುಗಳನ್ನು ತೆಗೆಯಲು ನಿರ್ದೇಶಿಸುವಂತೆ ಕೋರಿ ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್ನ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ''ಇದು ಸಂಪೂರ್ಣ ನಿಷ್ಪ್ರಯೋಜಕ ಅರ್ಜಿ'' ಎಂದು ಹೇಳಿದ್ದು ಮಾತ್ರವಲ್ಲದೇ ರಿಜ್ವಿಗೆ 50 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.
ಕುರಾನ್ನಲ್ಲಿನ 26 ಸಾಲುಗಳು ಭಯೋತ್ಪಾದನೆಗೆ ಉತ್ತೇಜನೆ ನೀಡುತ್ತದೆ. ಆದ್ದರಿಂದ ಈ ಸಾಲುಗಳನ್ನು ತೆಗೆದುಹಾಕಲು ಸೂಚನೆ ನೀಡಬೇಕು ಎಂದು ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್ ನ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ ಅರ್ಜಿ ಸಲ್ಲಿಸಿದ್ದರು. ಇಸ್ಲಾಮ್ಗೆ ನ್ಯಾಯ, ನೀತಿ, ಸಮಾನತೆ, ಕ್ಷಮೆ, ಸಹಿಷ್ಣುತೆಗಳು ಆಧಾರವಾಗಿದ್ದು, ಆದರೆ ಕುರಾನ್ನಲ್ಲಿರುವ 26 ಸಾಲುಗಳು ವೈಪರೀತ್ಯವಾಗಿದೆ. ಈ ಹಿನ್ನೆಲೆ ಇಸ್ಲಾಮ್ ತನ್ನ ಮೂಲ ತತ್ವದಿಂದ ದೂರ ಸರಿಯುತ್ತಿದೆ ಎಂದು ಕೂಡಾ ರಿಜ್ವಿ ಅರ್ಜಿಯಲ್ಲಿ ಹೇಳಿದ್ದಾರೆ.
ರಿಜ್ವಿ ಅರ್ಜಿಗೆ ಹಲವು ಮುಸ್ಲಿಂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇಸ್ಲಾಂ ಧಾರ್ಮಿಕ ಮುಖಂಡರು ಪ್ರತಿಭಟಿಸಿದ್ದರು. ಹಾಗೆಯೇ ರಿಜ್ವಿ ವಿರುದ್ಧ ಬರೇಲಿಯಲ್ಲಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಎಫ್ಐಆರ್ ಕೂಡ ದಾಖಲಿಸಲಾಗಿತ್ತು.
ವಸೀಮ್ ರಿಜ್ವಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡ ನ್ಯಾ. ಆರ್ ಎಫ್ ನಾರಿಮನ್, ನ್ಯಾ.ಬಿಆರ್ ಗವಾಯಿ, ನ್ಯಾ. ಹೃಷಿಕೇಶ್ ರಾಯ್ ಅವರಿದ್ದ ತ್ರಿ ಸದಸ್ಯ ಪೀಠವು, ಇದು ಸಂಪೂರ್ಣ ನಿಷ್ಪ್ರಯೋಜಕವಾದ ಅರ್ಜಿ ಎಂದು ಹೇಳಿದ್ದು ಅರ್ಜಿದಾರರಿಗೆ 50 ಸಾವಿರ ರೂಪಾಯಿಗಳ ದಂಡ ವಿಧಿಸಿ ಅರ್ಜಿಯನ್ನು ತಿರಸ್ಕರಿಸಿದೆ.