ಬೆಂಗಳೂರು ಏ 12 (DaijiworldNews/MS): ರಾಜ್ಯದಲ್ಲಿ ಕೊರೊನಾ ೨ ನೇ ಅಲೆ ತೀವ್ರವಾಗಿ ಹಬ್ಬುತ್ತಿದ್ದು ಸೋಂಕು ನಿಯಂತ್ರಣಕ್ಕೆ ಸಿಗದೇ, ಒಂದೇ ಸಮನೆ ಹೆಚ್ಚಾಗುತ್ತಿದೆ ಹೀಗಾಗಿ ಒಂದು ವಾರ ಕಾದು ನೋಡಿ ಕೊರೊನಾ ಪ್ರಕರಣಗಳ ಸಂಖ್ಯೆ ನೋಡಿಕೊಂಡು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬೀದರ್ ನಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ವಿಧಿಸಿದ್ದೇವೆ. ಜನರು ಸಹಕರಿಸದಿದ್ರೆ ಲಾಕ್ಡೌನ್ ಮಾಡುವುದು ಅನಿವಾರ್ಯವಾಗುತ್ತದೆ. ಲಾಕ್ಡೌನ್ ಮಾಡಿದರೆ ನಾಗರಿಕರಿಗೆ ತೊಂದರೆ ಆಗುತ್ತೆ. ಲಾಕ್ಡೌನ್ನಿಂದ ಆದ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ದಯವಿಟ್ಟು ಸಾರ್ವಜನಿಕರು ಕೊರೊನಾ ಗೈಡ್ಲೈನ್ಸ್ ಪಾಲಿಸಿ ಎಂದು ವಿನಂತಿಸಿಕೊಂಡಿದ್ದಾರೆ.
ಲಾಕ್ಡೌನ್ ಮಾಡುವ ಉದ್ದೇಶ ರಾಜ್ಯ ಸರ್ಕಾರಕ್ಕಿಲ್ಲ. ಆದರೆ ಇನ್ನು ಕೆಲ ದಿನ ಕಾದು ನೋಡಿ ಕೊರೊನಾ ನಿಯಂತ್ರಣಕ್ಕೆ ಬಾರದೆ ಇದ್ರೆ, ಸರ್ವಪಕ್ಷ ಸಭೆ ಕರೆದು ಲಾಕ್ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು . ಲಾಕ್ಡೌನ್ ಅಗತ್ಯವಿಲ್ಲವೆಂದು ತಜ್ಞರು ಸಲಹೆ ನೀಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ವಿಪಕ್ಷದವರು ಯಾವುದೇ ಸಲಹೆ ನೀಡಿದರೂ ಸ್ವೀಕಾರ ಮಾಡ್ತೀವಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.