ಮುಂಬೈ, ಏ.12 (DaijiworldNews/HR): ಹಾಸಿಗೆ ತಯಾರಿಸುವ ಕಾರ್ಖಾನೆಯೊಂದು ಹತ್ತಿ ಅಥವಾ ಇತರ ಕಚ್ಚಾವಸ್ತುಗಳ ಬದಲಿಗೆ ಉಪಯೋಗಿಸಿ ಬಿಸಾಡಿರುವ ಮಾಸ್ಕ್ಗಳನ್ನು ಬಳಸುತ್ತಿರುವ ಘಟನೆ ಮಹಾರಾಷ್ಟ್ರದಲ್ಲಿ ಪೊಲೀಸರ ಗಮನಕ್ಕೆ ಬಂದಿದೆ.
ಸಾಂಧರ್ಭಿಕ ಚಿತ್ರ
ಕಾರ್ಖಾನೆಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ಕಾರ್ಖಾನೆಯ ಆವರಣದಲ್ಲಿ ಕಂಡುಬಂದ ಮಾಸ್ಕ್ಗಳ ರಾಶಿಯನ್ನು ಬೆಂಕಿಹಚ್ಚಿ ನಾಶಪಡಿಸಿದ್ದಾರೆ.
ಮಾಸ್ಕ್ಗಳನ್ನು ಹಾಸಿಗೆ ತಯಾರಿಸಲು ಬಳಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಬಂದಿದ್ದು, ಅಧಿಕಾರಿಗಳು ಕುಸುಂಬಾ ಗ್ರಾಮದಲ್ಲಿರುವ ಕಾರ್ಖಾನೆಯ ಆವರಣಕ್ಕೆ ಭೇಟಿ ನೀಡಿದಾಗ, ಬಳಸಿದ ಮಾಸ್ಕ್ಗಳನ್ನು ಹಾಸಿಗೆಯೊಂದಕ್ಕೆ ತುಂಬುತ್ತಿರುವುದನ್ನು ಕಂಡು ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಗವಾಲಿ ಹೇಳಿದ್ದಾರೆ.
ಇನ್ನು ಕಾರ್ಖಾನೆಯ ಮಾಲೀಕ ಅಮ್ಜದ್ ಅಹ್ಮದ್ ಮನ್ಸೂರಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ದಂಧೆಯಲ್ಲಿ ಇನ್ನೂ ಎಷ್ಟು ಜನ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.