ಚಿಕ್ಕಮಗಳೂರು, ಏ.12 (DaijiworldNews/MB) : ಆರನೇ ವೇತನ ಆಯೋಗ ಶಿಫಾರಸು ಜಾರಿಗೆ ಆಗ್ರಹಿಸಿ ಕೆಎಸ್ಆರ್ಟಿಸಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರನೇ ದಿನಕ್ಕೆ ಕಾಲಿರಿಸಿದೆ, ಪ್ರತಿಭಟನಕಾರರು ತಟ್ಟೆ, ಲೋಟಗಳನ್ನು ಬಡಿದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮುಷ್ಕರನಿರತ ನೌಕರರು ತಟ್ಟೆ, ಲೋಟಗಳನ್ನು ಬಡಿದು ಪ್ರತಿಭಟನೆ ನಡೆಸಿದ್ದು ಪ್ರತಿಭಟನೆಯಲ್ಲಿ ನೌಕರರ ಕುಟುಂಬಸ್ಥರೂ ಕೂಡಾ ಭಾಗಿಯಾಗಿದ್ದರು.
ನೌಕರರು ಹಾಗೂ ನೌಕರರ ಕುಟುಂಬಸ್ಥರು ಸೇರಿ ತಮ್ಮ ಆರನೇ ವೇತನ ಆಯೋಗ ಶಿಫಾರಸು ಜಾರಿಗೆ ಆಗ್ರಹಿಸಿ ಘೋಷಣೆಗಳನ್ನೂ ಕೂಗಿದ್ದಾರೆ.
ಇನ್ನು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ನೌಕರರ ಆಕ್ರೋಶಕ್ಕೆ ಐದು ಬಸ್ಗಳ ಗಾಜು ಪುಡಿಯಾಗಿದೆ. ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಗಾಯವಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
''ಈಗ ಉಪಚುನಾವಣೆ ಕಾರಣದಿಂದಾಗಿ ವೇತನ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಈಗಾಗಲೇ ಚುನಾವಣಾ ಆಯೋಗದ ಬಳಿ ವೇತನ ಹೆಚ್ಚಳಕ್ಕೆ ಅವಕಾಶ ನೀಡುವಂತೆ ಕೋರಲಾಗಿದೆ'' ಎಂದು ಹೇಳಿರುವ ರಾಜ್ಯ ಸರ್ಕಾರ, ''ಆರನೇ ವೇತನ ಆಯೋಗ ಶಿಫಾರಸು ಮಾತ್ರ ಜಾರಿಗೆ ತರಲಾಗದು'' ಎಂದಿದೆ. ಹಾಗೆಯೇ ''ಈ ಮುಷ್ಕರದಿಂದಾಗಿ ಪ್ರತಿದಿನ 3,800 ಕೋಟಿ ನಷ್ಟವಾಗುತ್ತಿದೆ. ಹೀಗಾದರೆ ವೇತನ ಹೆಚ್ಚಿಸುವುದಾದರೂ ಹೇಗೆ'' ಎಂದು ಕೂಡಾ ಹೇಳಿದೆ.