ಬಾಗಲಕೋಟೆ, ಏ.12 (DaijiworldNews/MB) : ರಾಜ್ಯದಲ್ಲಿ ಮುಳುಗುತ್ತಿರುವ ಹಡಗು ವಿಚಾರದಲ್ಲೇ ವಿಪಕ್ಷ ಕಾಂಗ್ರೆಸ್ ಹಾಗೂ ಆಡಳಿತರೂಢ ಪಕ್ಷ ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಿದೆ. ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು, ''ಡಿಕೆಶಿ ಮುಳುಗ್ತಾರಾ ಅಂತಾ ಸಿದ್ದರಾಮಯ್ಯ, ಸಿದ್ದರಾಮಯ್ಯ ಮುಳುಗ್ತಾರಾ ಅಂತಾ ಡಿಕೆಶಿ ನೋಡ್ತಿದ್ದಾರೆ'' ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಈ ಹಿಂದೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಯಣಿಸುತ್ತಿರುವ ಹಡಗು ಮುಳುಗುತ್ತಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಳಿನ್ ಅವರು, ''ಡಿಕೆಶಿ ಮುಳುಗ್ತಾರಾ ಅಂತಾ ಸಿದ್ದರಾಮಯ್ಯ ಕಾಯ್ತಿದ್ದಾರೆ, ಸಿದ್ದರಾಮಯ್ಯ ಮುಳುಗ್ತಾರಾ ಅಂತಾ ಡಿಕೆಶಿ ಕಾಯ್ತಿದ್ದಾರೆ. ಹಡಗಿನ ಕ್ಯಾಪ್ಟನ್ಗಳನ್ನು ಆಚೆ ಈಚೆ ಮುಖ ಮಾಡಿಕೊಂಡು ಕೂತಿದ್ದಾರೆ'' ಎಂದು ವ್ಯಂಗ್ಯವಾಡಿದರು.
''ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ ಮೇಲೆ ತಮ್ಮ ಸ್ಥಿಮಿತನೂ ಕಳೆದುಕೊಂಡಿದ್ದಾರೆ'' ಎಂದು ಹೇಳಿದ ನಳಿನ್ ಅವರು, ''ಯಾರು ಮುಳುಗೋ ಹಡಗು?'' ಎಂದು ಪ್ರಶ್ನಿಸಿದರು. ''ಕಾಂಗ್ರೆಸ್ನ ಹಡಗೇ ತೂತಾಗಿದೆ. ನೀರು ಒಳಗಡೆ ಬರುತ್ತಿದೆ, ಅದರ ಭಯದಲ್ಲಿ ಬೇರೆಯವರ ಹಡಗು ಮುಳುಗ್ತಿದೆ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್ನವರ ಹಡಗನ್ನು ಎತ್ತಲು ಕೂಡಾ ಜನರು ಇಲ್ಲ'' ಎಂದು ಕುಟುಕಿದರು.
ಇನ್ನು ಬಿಜೆಪಿಯಲ್ಲಿನ ನಾಯಕತ್ವ ಸಮರದ ಬಗ್ಗೆ ಪ್ರತಿಕ್ರಿಯೆ ನೀಡಿದ ನಳಿನ್ ಅವರು, ''ನಮ್ಮ ಪಕ್ಷದ ನಾಯಕತ್ವದಲ್ಲಿ ಯಾವುದೇ ಬದಲಾವಣೆಯಿಲ್ಲ. ಬಿಎಸ್ವೈ ಅವರೇ ಇನ್ನೆರಡು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಯಾರೋ ಹಾದಿ ಬೀದಿಲಿ ಹೋಗುವವರು ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹೇಳಿಕೊಂಡು ಬಂದರೆ ನಾವು ಏನು ಮಾಡಲಾಗದು'' ಎಂದು ಹೇಳಿದರು.
ಪಕ್ಷದ ನೊಟೀಸ್ನ್ನು ಲವ್ ಲೆಟರ್ ಎಂದು ಹೇಳಿದ ಯತ್ನಾಳ್ ವಿರುದ್ದ ಕಿಡಿಕಾರಿದ ಅವರು, ''ಪಕ್ಷ ಈಗಾಗಲೇ ಯತ್ನಾಳ್ಗೆ ನೊಟೀಸ್ ನೀಡಿದ್ದು, ಯಾವುದು ಲವ್ ಲೆಟರ್ ಹಾಗೂ ಯಾವುದು ನೊಟೀಸ್ ಎಂದು ಗೊತ್ತಾಗದವರ ಬಗ್ಗೆ ಏನೆಂದು ಮಾತನಾಡುವುದು. ಯತ್ನಾಳ್ ಬಗ್ಗೆ ಶಿಸ್ತು ಸಮಿತಿ ಅವಲೋಕನ ಮಾಡಿ ಕ್ರಮಕೈಗೊಳ್ಳಲಿದೆ'' ಎಂದರು.