ಬೆಂಗಳೂರು, ಏ.12 (DaijiworldNews/HR): ಕೊರೊನಾ ನೈಟ್ ಕರ್ಫ್ಯೂ ಸಮಯ ಬದಲಾವಣೆಗೆ ಒತ್ತಾಯಿಸಿರುವ ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಪದಾಧಿಕಾರಿಗಳು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರನ್ನು ಇಂದು ಭೇಟಿ ಮಾಡಿ ಚರ್ಚೆ ನಡೆಸಿದರು.
ಸಚಿವ ಸುಧಾಕರ್ ನಿವಾಸಕ್ಕೆ ಭೇಟಿ ನೀಡಿದ ಅವರು, ಕೊರೊನಾ ರಾತ್ರಿ ಕರ್ಫ್ಯೂನ್ನು ರಾತ್ರಿ ಹತ್ತು ಗಂಟೆ ಬದಲಿಗೆ ತಮಿಳುನಾಡು ಮಾದರಿಯಂತೆ ಹನ್ನೊಂದು ಗಂಟೆಯವರೆಗೆ ವಿಸ್ತರಿಸುವಂತೆ ಒತ್ತಾಯ ಮಾಡಿದ್ದು, ರಾತ್ರಿ ಹತ್ತು ಗಂಟೆಗೆ ಹೊಟೇಲ್ ಗಳ ಬಾಗಿಲು ಮುಚ್ಚುವುದು ಕಷ್ಟವಾಗುತ್ತಿದ್ದು ರಾತ್ರಿಯ ವೇಳೆ ಊಟಕ್ಕೆ ಹೆಚ್ಚು ಜನರು ಬರುತ್ತಾರೆ. ಅಲ್ಲದೆ ಹತ್ತು ಗಂಟೆಯೊಳಗೆ ಹೊಟೇಲ್ ಕಾರ್ಮಿಕರು ತಮ್ಮ ಮನೆಗಳಿಗೆ ಹೋಗಲು ಕಷ್ಟವಾಗುತ್ತಿರುವುದರಿಂದ ಹನ್ನೊಂದು ಗಂಟೆಗೆ ವಿಸ್ತರಿಸಿ ಬೆಳಗ್ಗೆ ಆರು ಗಂಟೆಯವರೆಗೂ ಮಾಡಿ ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಸಂಘದ ಈ ಮನವಿಗೆ ಸಚಿವ ಸುಧಾಕರ್ ನಿರಾಕರಿಸಿದ್ದು, ಇದು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಈಗಿರುವ ಸಮಯ ಬದಲಾವಣೆ ಸಾಧ್ಯವೇ ಇಲ್ಲ. ಕೊರೊನಾ ನಿಯಂತ್ರಣ ಅನಿವಾರ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುವ ಆತಂಕವಿದೆ. ಹಾಗಾಗಿ ಸಮಯ ಬದಲಾವಣೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.