ಮುಂಬೈ, ಏ.12 (DaijiworldNews/MB) : ''ಭಾರತ-ಪಾಕ್ ಯುದ್ಧದಂತಲ್ಲ ಕೊರೊನಾ ಯುದ್ದ, ಈ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಬೇಡಿ'' ಎಂದು ಆಡಳಿತಾರೂಢ ಶಿವಸೇನೆಯ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮತ್ತೆ ರಾಜ್ಯದಲ್ಲಿ ಲಾಕ್ಡೌನ್ ಮಾಡಲು ಚಿಂತನೆ ನಡೆಸಿದ್ದಾರೆ. ಈಗಾಗಲೇ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಹೇರಲಾಗಿದೆ. ಆದರೆ ಮತ್ತೆ ಲಾಕ್ಡೌನ್ ಚಿಂತನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪತಿಪಕ್ಷವಾದ ಬಿಜೆಪಿ ಲಾಕ್ಡೌನ್ ಬೇಡ ಎಂದು ಹೇಳಿದೆ. ಈ ವಿಚಾರವಾಗಿ ಸಂಜಯ್ ರಾವತ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಬಿಜೆಪಿ ಮುಖಂಡ ಪ್ರಕಾಶ್ ಜಾವ್ಡೇಕರ್ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಹೇರುವ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, ''ಮತ್ತೆ ಲಾಕ್ಡೌನ್ ಹೇರುವುದರಿಂದ ಆರ್ಥಿಕತೆಗೆ ತೀವ್ರ ಏಟು ಬೀಳಲಿದೆ. ಆದ್ದರಿಂದ ಮತ್ತೆ ಲಾಕ್ಡೌನ್ ಬೇಡ'' ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವತ್, ''ಮಹಾರಾಷ್ಟ್ರದ ಜನರು ಮತ್ತೆ ಲಾಕ್ಡೌನ್ ಬೇಡವೆನ್ನುತ್ತದಿದಾರೆ ಎಂದು ಫಡ್ನವೀಸ್ ವಾದ ಮಾಡುತ್ತಿದ್ದಾರೆ. ಹೌದು ಅದು ನಮಗೂ ತಿಳಿದಿದೆ. ಆದರೆ ಜನರ ಪ್ರಾಣ ಉಳಿಸಲು ಬೇರೆ ಯಾವ ಮಾರ್ಗವಿದೆ'' ಎಂದು ಫಡ್ನವೀಸ್ಗೆ ಪ್ರಶ್ನಿಸಿದ್ದಾರೆ.
ಇನ್ನು, ''ಪ್ರಕಾಶ್ ಜಾವ್ಡೇಕರ್ ಮಹಾರಾಷ್ಟ್ರಕ್ಕೆ ಬಂದು ಇಲ್ಲಿನ ಪರಿಸ್ಥಿತಿಯನ್ನು ನೋಡಬೇಕು. ದೆಹಲಿಯಲ್ಲಿ ಕುಳಿತು ನಾವು ಇಲ್ಲಿ ಏನು ಮಾಡಬೇಕು ಎಂದು ಹೇಳುವುದು ಸರಿಯಲ್ಲ'' ಎಂದೂ ಹೇಳಿದರು.
ಇನ್ನು, ''ದೇಶದಲ್ಲಿ ಮತ್ತೆ ಲಾಕ್ಡೌನ್ ಮಾಡಬೇಕೋ, ಬೇಡವೋ ಎಂದು ತೀರ್ಮಾನಿಸಬೇಕಾದ ಪ್ರಧಾನಿ ಮೋದಿ ಅವರು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಅವರು ಚುನಾವಣಾ ಕಾರ್ಯ ಮುಗಿದ ಮೇಲೆ ದೇಶದ ಬಗ್ಗೆ ಯೋಚನೆ ಮಾಡಬಹುದೇನೋ ''ಎಂದು ಲೇವಡಿ ಮಾಡಿದರು.