ತಿರುವನಂತಪುರ, ಏ 12 (DaijiworldNews/MS): ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಎಲ್ಲ ಭಕ್ತರಂತೆ, ವ್ರತಧಾರಿಯಾಗಿ ಸಾಂಪ್ರದಾಯಿಕ "ಮಣಿ ಮಾಲಾ" ಧರಿಸಿ "ಇರುಮುಡಿ" ಯನ್ನು ತಲೆಯ ಮೇಲೆ ಹೊತ್ತುಕೊಂಡು 5 ಕಿ.ಮೀ ಚಾರಣ ಮಾಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜಭವನ " ಗೌರವಾನ್ವಿತ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್ ಭಗವಾನ್ ಅಯ್ಯಪ್ಪನ ವಾಸಸ್ಥಾನವಾದ ಶಬರಿಮಲೆಯ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಶಬರಿಮಲೆ ದೇವಸ್ಥಾನವೂ ಎಲ್ಲಾ ಧರ್ಮದ ಭಕ್ತರನ್ನು ಆಕರ್ಷಿಸುತ್ತದೆ. ಶಬರಿಮಲೆಯ ಸುತ್ತುವರೆದಿರುವ ವಾವರ ಸ್ವಾಮಿಯ ದೇವಾಲಯವು ಕೋಮು ಸೌಹಾರ್ದತೆ ಮತ್ತು ಏಕತೆಗೆ ಉದಾಹರಣೆಯಾಗಿದೆ" ಎಂದಿದೆ.
2018 ರಲ್ಲಿ ಸುಪ್ರೀಂ ಕೋರ್ಟ್ 10-50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶದ ಮೇಲಿನ ನಿಷೇಧವನ್ನು ತೆಗೆದುಹಾಕಿದ ಬಳಿಕ ದೇಗುಲ ವಿವಾದದಲ್ಲಿತ್ತು. ಪ್ರಾರ್ಥನಾ ಕೇಂದ್ರ ಪ್ರವೇಶಕ್ಕೆ ಮಹಿಳೆಯರನ್ನು ನಿಷೇಧಿಸುವುದು ಅವರಿಗೆ ಇರುವ ಪೂಜೆಯ ಹಕ್ಕು ಕಸಿದುಕೊಂಡಂತೆ ಮತ್ತು ಮಾನವ ಘನತೆಗೆ ಕುಂದು ತರುವ ವಿಚಾರ ಎಂದು ಸುಪ್ರೀಂ ಹೇಳಿತ್ತು.