ಬೆಳಗಾವಿ,ಏ.11 (DaijiworldNews/HR): "ಬಿಜೆಪಿಯವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಂಹ ಸ್ವಪ್ನ ಆಗಿದ್ದಾರೆ" ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಂಗಾಳ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿ ಹೋಗಲಿಲ್ಲ ಎಂದು ಬಿಜೆಪಿಯವರು ಹೇಳಿದ್ದನ್ನು ಗಮನಿಸಿದ್ದು, ಅವರು ಬರಲಿಲ್ಲವಾದರೂ ಮಾತನಾಡುತ್ತಾರೆ, ಬಂದರೂ ಚರ್ಚಿಸುತ್ತಾರೆ. ರಾಹುಲ್ ಬಿಜೆಪಿಯವರ ಕನಸಲ್ಲೂ ಬರುತ್ತಾರೆ ಎಂದಾಯಿತು. ಅವರಿಗೆ ಬಿಜೆಪಿಯವರು ಹೆದರುತ್ತಾರೆ" ಎಂದರು.
ಇನ್ನು ಕಾಂಗ್ರೆಸ್ಗೆ ಒಂದು ನಿಲುವಿಲ್ಲ, ಅದೊಂದು ಬಸ್ ಸ್ಟ್ಯಾಂಡ್ ಆಗಿದೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಅವರು, "ಪ್ರಧಾನಿ ಮೋದಿ ಎಲ್ಲರ ಕೈ ಹಿಡಿದಿದ್ದು, ತಮಿಳುನಾಡಿನಲ್ಲಿ ಎಐಎಡಿಂಕೆ ಕೈ ಹಿಡಿದಿಲ್ಲವೇ? ಸಂವಿಧಾನದ ರಕ್ಷಣೆಗೆ ಮತ್ತು ಅದರ ಏಳಿಗೆಗಾಗಿ ಒಗ್ಗೂಡಿ ನಾವು ಕೆಲಸ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಹಯೋಗ ತಪ್ಪಲ್ಲ" ಎಂದು ಹೇಳಿದ್ದಾರೆ.