ಬೆಳಗಾವಿ, ಏ.11 (DaijiworldNews/HR): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಲಿಗೆಗೆ ಮತ್ತು ಮಿದುಳಿಗೆ ನಿಯಂತ್ರಣ ಇಲ್ಲ, ಅದು ಈಗಾಗಲೇ ಅನೇಕ ಸಾರಿ ಸಾಬೀತಾಗಿದೆ" ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಕುರಿತು ಬೆಳಗಾವಿ ಲೋಕಸಭೆ ಉಪ ಚುನಾವಣೆಯ ಪ್ರಚಾರ ಕಾರ್ಯ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದಿವಂಗತ ಸಚಿವ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅವರ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದ್ದು, ಮುಖ್ಯಮಂತ್ರಿಯಾಗಿ, ವಿಪಕ್ಷ ನಾಯಕರಾಗಿ ಸೇವೆ ಸಲ್ಲಿಸಿದರೂ ಕೂಡ ಹಗುರ ಮಾತು ಬಿಟ್ಟಿಲ್ಲ" ಎಂದರು.
ಇನ್ನು ಕರ್ನಾಟಕದಿಂದ 25 ಬಿಜೆಪಿ ಸಂಸದರಿದ್ದರೂ ರಾಜ್ಯಕ್ಕಾಗಿ ಸಂಸತ್ ನಲ್ಲಿ ಧ್ವನಿ ಎತ್ತುತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಧ್ವನಿ ಎತ್ತುವ ಅಗತ್ಯ ಇಲ್ಲ, ನಮ್ಮ ಕ್ಷೇತ್ರಕ್ಕೆ ರಾಜ್ಯಕ್ಕೆ ಏನು ಬೇಕೋ ಪ್ರಧಾನಿ ಅದನ್ನು ಕೊಡುತ್ತಿದ್ದಾರೆ. ವಿಪಕ್ಷದಲ್ಲಿದ್ದವರು ಧ್ವನಿ ಎತ್ತಬೇಕು, ಆಡಳಿತ ಪಕ್ಷದಲ್ಲಿದ್ದವರು ಕೆಲಸ ಮಾಡಬೇಕು ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು" ಎಂದುಹೇಳಿದ್ಡಾರೆ.