ಬೆಂಗಳೂರು, ಏ.11 (DaijiworldNews/MB) : ''ವೇತನ ಹೆಚ್ಚಿಸುವ ಅವಕಾಶಗಳಿದ್ದರೂ ಕೂಡಾ ಸರ್ಕಾರ ವೇತನ ಹೆಚ್ಚಳ ಮಾಡುತ್ತಿಲ್ಲ. ಸರ್ಕಾರಕ್ಕೆ ನೌಕರರ ಹಿತ ಬೇಕಿಲ್ಲ'' ಎಂದು ಕಾಂಗ್ರೆಸ್, ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರದವ ವಿರುದ್ದ ವಾಗ್ದಾಳಿ ನಡೆಸಿದೆ.
ಸಾರಿಗೆ ನೌಕರರು ಮುಷ್ಕರದ ವಿಚಾರದಲ್ಲಿ ಟ್ಬೀಟ್ ಮಾಡಿರುವ ಕಾಂಗ್ರೆಸ್, ''ಒಂದೆಡೆ ಯುಗಾದಿ ಹಬ್ಬ ಹಾಗೂ ದೀರ್ಘ ರಜೆಗಳಿರುವ ಕಾರಣ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಮತ್ತೊಂದೆಡೆ ಲಾಕ್ಡೌನ್ ಆಗಬಹುದೆನ್ನುವ ಭೀತಿಯಲ್ಲಿ ವಲಸೆ ಕಾರ್ಮಿಕರು ಊರು ಸೇರಿಕೊಳ್ಳುವ ಧಾವಂತದಲ್ಲಿದ್ದಾರೆ.ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಲ್ಲಿ ದುಪ್ಪಟ್ಟು ದರ ಸುಲಿಗೆಗಿಳಿದಿದ್ದಾರೆ'' ಎಂದು ದೂರಿದೆ.
''ಬಿಜೆಪಿ ಸರ್ಕಾರ ಸಾರಿಗೆ ನೌಕರ ಸಮಸ್ಯೆಗಳನ್ನು ಬಗೆಹರಿಸದೆ ಬೇಕಂತಲೇ ಅವರನ್ನು ಇನ್ನಷ್ಟು ಶೋಷಿಸುತ್ತಾ, ದಬ್ಬಾಳಿಕೆ ನಡೆಸಿ ಹತಾಶರನ್ನಾಗಿಸುವ ಕೆಲಸ ಮಾಡುತ್ತಾ ಖಾಸಗೀಕರಣದ ತನ್ನ ಮೂಲ ಉದ್ದೇಶಕ್ಕೆ ವಾತಾವರಣ ಹದ ಮಾಡಿಕೊಳ್ಳುತ್ತಿದೆ. ನೌಕರರ ವೇತನ ಹೆಚ್ಚಿಸುವ ಅವಕಾಶಗಳಿದೆ ಆದರೆ ಸರ್ಕಾರಕ್ಕೆ ನೌಕರರ ಹಿತ ಬೇಕಿಲ್ಲ'' ಎಂದು ಆರೋಪಿಸಿದೆ.
''ನೌಕರರು ಚೆನ್ನಾಗಿದ್ದರೆ ಸಾರಿಗೆ ಸಂಸ್ಥೆಗಳು ಚೆನ್ನಾಗಿರುತ್ತವೆ. ಆದರೆ ಈ ಸರ್ಕಾರಕ್ಕೆ ಸಾರಿಗೆ ಸಂಸ್ಥೆಗಳು ಚೆನ್ನಾಗಿರುವುದು ಬೇಕಿಲ್ಲ. ಸಂಸ್ಥೆಗಳು ಉತ್ತಮವಾಗಿದ್ದರೆ ಖಾಸಗೀಕರಣಕ್ಕೆ ಬೇರೆ ಸಬೂಬು ಸಿಗುವುದಿಲ್ಲ. ಹೀಗಾಗಿ ಸಾರಿಗೆ ನಿಗಮಗಳನ್ನು ಮುಳುಗಿಸುವ ಹುನ್ನಾರ ನಡೆಸಿದೆ ಬಿಜೆಪಿ ಸರ್ಕಾರ'' ಎಂದು ವಾಗ್ದಾಳಿ ನಡೆಸಿದೆ.