ಕಲಬುರ್ಗಿ, ಏ.11 (DaijiworldNews/MB) : ''ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಕಾನೂನು ಬಾಹಿರವಾಗಿದ್ದು ಈ ಮುಷ್ಕರ ರಾಜಕೀಯ ಪ್ರೇರಿತವಾಗಿದೆ'' ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಈ ರೀತಿ ಮುಷ್ಕರ ನಡೆಸುವುದು ನಿಯಮಾವಳಿಯಲ್ಲಿ ಇಲ್ಲ. ಸಂಘಕ್ಕೆ ಗೌರವ ಅಧ್ಯಕ್ಷರನ್ನು ನೇಮಿಸಿಕೊಳ್ಳಲು ಅನುಮತಿ ಇಲ್ಲ. ಅವರಿಗೆ ಅದನ್ನು ತಿಳಿಸಿದರೂ ಅವರು ತಿಳಿದುಕೊಳ್ಳಲು ಸಿದ್ದರಾಗಿಲ್ಲ. ಅಷ್ಟಕ್ಕೂ ಈ ಮುಷ್ಕರದ ಹಿಂದೆ ರಾಜಕೀಯವಿದ್ದು ನಾವು ಮಾತುಕತೆಗೆ ಕರೆದರೂ ಅವರು ಬಂದಿಲ್ಲ'' ಎಂದು ಆರೋಪಿಸಿದರು.
ಇನ್ನು, ''ಈ ಮುಷ್ಕರದಿಂದಾಗಿ ಪ್ರತಿದಿನ 3,800 ಕೋಟಿ ನಷ್ಟವಾಗುತ್ತಿದೆ. ಸರ್ಕಾರ ಈಗಾಗಲೇ 4,000 ಕೋಟಿ ಹಣವನ್ನು ನಿಗಮಕ್ಕೆ ನೀಡಿದೆ. ಇನ್ನು ವೇತನ ಪರಿಷ್ಕರಣೆ ಬಗ್ಗೆಯೂ ಮೇ 5ರ ನಂತರ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ಸಾರಿಗೆ ಸಚಿವರು ಈಗಾಗಲೇ ಹೇಳಿದ್ದಾರೆ. ಹಾಗಿರುವಾಗಲೂ ಮುಷ್ಕರ ನಿರತ ನೌಕರರು ಸಂಧಾನಕ್ಕೆ ಬರದಿರುವುದು ರಾಜಕೀಯ ಪ್ರೇರಿತ ಮುಷ್ಕರ ಎಂಬುದಕ್ಕೆ ಸಾಕ್ಷಿಯಾಗಿದೆ'' ಎಂದು ಹೇಳಿದರು.
''ಮೇ 4ರವರೆಗೆ ಕಾದು ನೋಡಿದರೆ ಸಾರಿಗೆ ನೌಕರರ ಭವಿಷ್ಯ ಉಜ್ವಲವಾಗಲಿದೆ. ಮೊಂಡುತನ ಅನುಸರಿಸುವುದು ಯಾರಿಗೂ ಒಳ್ಳೆಯದಲ್ಲ'' ಎಂದು ಹೇಳಿದ ಅವರು, ''ಈಗಾಗಲೇ ಸಾರಿಗೆ ಇಲಾಖೆಯಿಂದ ವಜಾಗೊಂಡವರು ಕಾರ್ಮಿಕ ಇಲಾಖೆ ಮುಂದೆ ಬಂದರೆ ವಿಚಾರಿಸಿ ತೀರ್ಮಾನ ಕೈಗೊಳ್ಳುತ್ತೇವೆ'' ಎಂದೂ ಹೇಳಿದರು.