ಕಲಬುರ್ಗಿ, ಎ.11 (DaijiworldNews/PY): ರಾಜ್ಯದ ಸಿಎಂ ಬಿ.ಎಸ್. ಯಡಿಯೂರಪ್ಪ ಪಯಣಿಸುತ್ತಿರುವ ಹಡಗು ಮುಳುಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ ಹೇಳಿಕೆಗೆ ತಿರುಗೇಟು ನೀಡಿರುವ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, "ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹಡಗಿಗೆ ಸಿದ್ದರಾಮಯ್ಯ ರಂಧ್ರ ಕೊರೆಯುತ್ತಿದ್ದಾರೆ" ಎಂದಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಈ ಹಡಗಿಗೆ ಸಿದ್ದರಾಮಯ್ಯ ಅವರು ಎರಡು ರಂಧ್ರ ಮಾಡಿದರೆ ಸಾಕು ಹಡಗು ಪೂರ್ತಿಯಾಗಿ ಮುಳುಗಿ ಹೋಗುತ್ತದೆ. ಡಿ.ಕೆ. ಶಿವಕುಮಾರ್ ಅವರನ್ನು ಈ ಮುಳಗುತ್ತಿರುವ ಹಡಗಿಗೆ ಡ್ರೈವರ್ ಅನ್ನಾಗಿ ಮಾಡಬೇಕು" ಎಂದು ವ್ಯಂಗ್ಯವಾಡಿದ್ದಾರೆ.
"ಕಾಂಗ್ರೆಸ್ನ ಹಡಗಿಗೆ ಒಂದು ಕಡೆಯಿಂದ ನಾಯಕರಾದ ಸಿದ್ದರಾಮಯ್ಯ ಹಾಗೂ ಇನ್ನೊಂದು ಕಡೆಯಿಂದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ, ರಮೇಶಕುಮಾರ್ ರಂಧ್ರ ಕೊರೆಯುತ್ತಿದ್ದಾರೆ. ಈ ಹಡಗು ಸಂಪೂರ್ಣವಾಗಿ ಮುಳುಗಿ ಹೋದ ಬಳಿ ಸಿದ್ದರಾಮಯ್ಯ ಅವರೇ ಖುಷಿ ಪಡುವ ವ್ಯಕ್ತಿ" ಎಂದು ಲೇವಡಿ ಮಾಡಿದ್ದಾರೆ.
"ಪಕ್ಷದಿಂದ ಯತ್ನಾಳ್ ಅವರ ಉಚ್ಚಾಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷ ಅಥವಾ ಸರ್ಕಾರದಲ್ಲಿ ನಮ್ಮ ಸಹೋದ್ಯೋಗಿಯಾದವರು ಅದರ ಚೌಕಟ್ಟಿನೊಳಗೆ ಮಾತನಾಡಬೇಕು. ಒಂದು ವೇಳೆ ಚೌಕಟ್ಟು ಮೀರಿದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಅದಕ್ಕೆ ರಾಜಕೀಯ ಕಾರ್ಯದರ್ಶಿಗಳು, ಪಕ್ಷದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಇದ್ದಾರೆ" ಎಂದು ತಿಳಿಸಿದ್ದಾರೆ.
"ಬಿಜೆಪಿ ಪಕ್ಷದವರೇ ಆದ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿತ್ಯವೂ ಏನು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಗಮನಿಸಿಲ್ಲವೇ? ಮುಖ್ಯಮಂತ್ರಿ ಹಡಗೇ ಮುಳುಗುತ್ತಿದೆ ಎನ್ನುವುದಕ್ಕೆ ಯತ್ನಾಳ್ ಹೇಳಿಕೆಗಳೇ ಸಾಕ್ಷಿಯಾಗಿವೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು.
"ಇನ್ನು ಅಭ್ಯರ್ಥಿ ಮಾಡುವ ಮೂಲಕ ಸತೀಶ ಜಾರಕಿಹೊಳಿ ಅವರನ್ನು ಹರಕೆಯ ಕುರಿ ಮಾಡಲಾಗಿದೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಮಂಗಲಾ ಅಂಗಡಿ ಅವರಿಗೆ ಏನು ಮಾಡಿದರು?ಮೊದಲು ಯಾರ ಹೆಸರು ಕೇಳಿಬರುತ್ತಿತ್ತು. ನಂತರ ಏನಾಯ್ತು ? ರವಿ ಯಾವಾಗಲೂ ಸುಳ್ಳನ್ನೇ ಹೇಳುತ್ತಾನೆ. ಅವನ ಹೇಳಿಕೆಗೆ ಉತ್ತರ ಕೊಡುವುದಿಲ್ಲ" ಎಂದಿದ್ದರು.