ನವದೆಹಲಿ, ಎ.11 (DaijiworldNews/PY): "ದೇಶದಾದ್ಯಂತ ಸೃಷ್ಠಿಯಾದ ಕೊರೊನಾ ಲಸಿಕೆ ಕೊರತೆಯ ವಿಚಾರದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಕೊರೊನಾ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿಲ್ಲ" ಎಂದಿದ್ದಾರೆ.
ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, "ದೇಶದಲ್ಲಿ ಅಭಿವೃದ್ದಿಯಾದ ಕೊರೊನಾ ಲಸಿಕೆಗಳನ್ನು ಮೋದಿ ಸರ್ಕಾರ ವಿದೇಶಗಳಿಗೆ ರಫ್ತು ಮಾಡಿದೆ. ಇದರಿಂದ ದೇಶದ ವಿವಿಧ ಭಾಗಗಳಲ್ಲಿ ಲಸಿಕೆ ಕೊರೆತೆ ಉಂಟಾಗಿದೆ. ಚುನಾವಣಾ ಪ್ರಚಾರ ಸೇರಿದಂತೆ ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಿಕೆಯಿಂದ ಕೊರೊನಾದ ಎರಡನೇ ಅಲೆ ಹೆಚ್ಚಾಗಿದ್ದು, ನಾವೆಲ್ಲರೂ ಕೂಡಾ ಇದಕ್ಕೆ ಜವಾಬ್ದಾರರು. ಈ ವಿಚಾರವನ್ನು ಅರಿತು, ದೇಶದ ಹಿತಾಸಕ್ತಿಯನ್ನು ಕಾಪಾಡಬೇಕು" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರವಿರುವ ಸಿಎಂಗಳು ಹಾಗೂ ಸಚಿವರು , ಸೋಂಕು ನಿಯಂತ್ರಣ, ಆರ್ಥಿಕತೆಯ ಕುಸಿತ, ಲಾಕ್ಡೌನ್ ಸೇರಿ ಇತರ ಸಮಸ್ಯೆಗಳ ನಿಯಂತ್ರಣಕ್ಕೆ ಅಭಿಪ್ರಾಯ ತಿಳಿಸುವಂತೆ ತಿಳಿಸಿದ್ದಾರೆ.
"ಕೊರೊನಾ ಸೋಂಕಿನ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆ ಎಲ್ಲಾ ಸಾರ್ವಜನಿಕ ಸಮಾರಂಭಗಳು ಹಾಗೂ ಚುನಾವಣಾ ರ್ಯಾಲಿಗಳನ್ನು ರದ್ದು ಮಾಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು" ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.