ಬೆಂಗಳೂರು, ಏ.11 (DaijiworldNews/HR): ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕರ್ನಾಟಕದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ, "ಪ್ರಧಾನಮಂತ್ರಿ ನರೇಂದ್ರ ಮೋದಿಯರವರೊಂದಿಗೆ ಇಂದು ಮಾತನಾಡಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ರಾಜ್ಯದ ಕ್ರಮಗಳ ಬಗ್ಗೆ ಪ್ರಧಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಮೈಕ್ರೋಕಂಟೈನ್ಮೆಂಟ್ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದ್ದಾರೆ" ಎಂದರು.
ಇನ್ನು "ಕೊರೊನಾ ವಿರುದ್ಧದ ನಮ್ಮ ಸಮರದಲ್ಲಿ ಲಸಿಕೆ ನಮ್ಮ ಸುರಕ್ಷಾ ಕವಚವಾಗಿದ್ದು, 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಿರಿ, ನಿಮ್ಮ ಕುಟುಂಬದ, ನೆರೆಹೊರೆಯ ಅರ್ಹರಿಗೆ ಲಸಿಕೆ ಪಡೆಯಲು ಪ್ರೇರೇಪಿಸಿ, ಜಾಗೃತಿ ಮೂಡಿಸಿ. ಇಂದಿನಿಂದ ಏಪ್ರಿಲ್ 14 ರವರೆಗೆ 'ಲಸಿಕೆ ಉತ್ಸವ'ದಲ್ಲಿ ಪಾಲ್ಗೊಳ್ಳಿ. ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ" ಎಂದು ಮನವಿ ಮಾಡಿಕೊಂಡಿದ್ದಾರೆ.