ಅಲಿಗಢ, ಏ.11 (DaijiworldNews/MB) : ಮದುವೆಯಾದ ಎರಡು ವರ್ಷಗಳ ಬಳಿಕ ಮಹಿಳೆಯೊಬ್ಬರು ತನ್ನ ಪತಿ ಮತ್ತು ಆತನ ಇಬ್ಬರು ಸಹೋದರಿಯರನ್ನು ತನ್ನನ್ನು ಬಲವಂತವಾಗಿ ಮತಾಂತರಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮಹಿಳೆಯು, ನನ್ನ ಪತಿ ಮುಸ್ಲಿಂ ಎಂದು ತನಗೆ ತಿಳಿದಿರಲಿಲ್ಲ. ನನ್ನ ಅತ್ತೆಯನ್ನು ನಾನು ಭೇಟಿಯಾಗಿಲ್ಲ. ಹಾಗೆಯೇ ಮದುವೆಯ ಬಳಿಕ ನಾನು ನನ್ನ ಹಿಂದಿನ ಹೆಸರನ್ನು ಬದಲು ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಮತಾಂತರ ವಿರೋಧಿ ಕಾನೂನಿನಡಿಯಲ್ಲಿ 25 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಸಹೋದರಿಯರ ವಿರುದ್ಧ ಈಗ ಪ್ರಕರಣ ದಾಖಲಿಸಲಾಗಿದೆ.
ವರದಿಗಳ ಪ್ರಕಾರ, ಪೂಜಾ ಸೋನಿ (23) ಎಂಬ ಮಹಿಳೆ ಛತ್ತೀಸ್ಗಢ ಮೂಲದವಳಾಗಿದ್ದು 2019 ರ ಮಾರ್ಚ್ನಲ್ಲಿ ದೆಹಲಿಯಲ್ಲಿ ಅಶೋಕ್ ರಜಪೂತ್ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ. ಆಕೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ಆಕೆಗೆ ಪ್ಲಂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ರಜಪೂತ್ನ ಪರಿಚಯವಾಗಿ ಅವರು ಫೋನ್ನಲ್ಲಿ ಮಾತನಾಡಲು ಪ್ರಾರಂಭಿಸಿದ್ದರು. ಬಳಿಕ ದೇವಾಲಯದಲ್ಲಿ ಅವರು ವಿವಾಹವಾಗಿದ್ದರು. ದಂಪತಿಗಳು ನೋಯ್ಡಾದಲ್ಲಿ ವಾಸಿಸುತ್ತಿದ್ದರು.
ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ, "ಈ ವರ್ಷ ಫೆಬ್ರವರಿ 7 ರಂದು ನಮಗೆ ಮಗಳು ಜನಿಸಿದಳು. ಮಾರ್ಚ್ 22 ರಂದು ಅಶೋಕ್ ರಜಪೂತ್ ನನ್ನನ್ನು ಅಲಿಗಢ ಹಳ್ಳಿಯೊಂದರಲ್ಲಿರುವ ತಮ್ಮ ಮನೆಗೆ ಕರೆದೊಯ್ದರು. ಅಲ್ಲಿ ನನಗೆ ಅವರ ನಿಜವಾದ ಹೆಸರು ಅಫ್ಜಲ್ ಖಾನ್ ಎಂದು ತಿಳಿಯಿತು. ನನ್ನನ್ನು ನಮಾಝ್ ಮಾಡಲು ಒತ್ತಾಯಿಸಲಾಯಿತು. ನನ್ನ ಧರ್ಮದ ಪ್ರಾರ್ಥನೆಯನ್ನು ತಡೆಯಲಾಯಿತು ಎಂದು ದೂರಿದ್ದಾರೆ.
"ಏಪ್ರಿಲ್ 8 ರಂದು ಅವರು ನನ್ನ ಮಗಳನ್ನು ನನ್ನಿಂದ ದೂರ ಮಾಡಿದ್ದಾರೆ. ನನ್ನನ್ನು ಬಲವಂತವಾಗಿ ಮತಾಂತರಗೊಳಿಸಿದ್ದು ನನಗೆ 'ಅಲ್ನಾ' ಎಂದು ಮರುನಾಮಕರಣ ಮಾಡಿದ್ದಾರೆ ಎಂದು ಕೂಡಾ ಆರೋಪಿಸಿದ್ದಾರೆ. ಆಕೆಯ ಮಾವ ಆಕೆಯನ್ನು ಮನೆಯಿಂದ ಹೊರ ಹಾಕಿದರು ಎಂದು ಕೂಡಾ ಆಕೆ ದೂರಿದ್ದಾರೆ.
ಈ ಬಗ್ಗೆ ಲೋಧಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಸೋಮವಾರ ಮಹಿಳೆಯ ಹೇಳಿಕೆಯನ್ನು ಸಿಆರ್ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ನ್ಯಾಯಾಲಯದಲ್ಲಿ ದಾಖಲಿಸಲಾಗುತ್ತದೆ.
ಇನ್ನು ಉತ್ತರಪ್ರದೇಶದಲ್ಲಿ ಕಳೆದ ವರ್ಷ ನವೆಂಬರ್ನಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಯಾಗಿದ್ದು ಇದುವರೆಗೆ 32 ಎಫ್ಐಆರ್ ದಾಖಲಿಸಲಾಗಿದೆ.