ನವದೆಹಲಿ, ಏ.11 (DaijiworldNews/HR): "ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ರೈತರು ನಿಲ್ಲಿಸಬೇಕು" ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ವಿವಾದಾತ್ಮಕ ಅಂಶಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಮಾತುಕತೆಗೆ ಸರ್ಕಾರ ಸಿದ್ಧವಾಗಿದ್ದು, ರೈತರು ಪ್ರತಿಭಟನೆ ಬಿಟ್ಟು ಮಾತುಕತೆಗೆ ಬರಬೇಕು" ಎಂದು ಆಹ್ವಾನ ನೀಡಿದ್ದಾರೆ.
ಇನ್ನು ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದರೂ ಕೂಡ, ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ರೈತ ಸಂಘಟನೆಗಳು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸಚಿವರು ಮತ್ತೆ ಮಾತುಕತೆಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
ಪ್ರತಿಭಟನೆಯ 150ನೇ ದಿನದ ಅಂಗವಾಗಿ ಏಪ್ರಿಲ್ 24ರಂದು ದಿಲ್ಲಿ ಗಡಿಯಲ್ಲಿ ಒಂದು ವಾರದ ಬೃಹತ್ ಕಾರ್ಯಕ್ರಮ ಆಯೋಜಿಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.