ನವದೆಹಲಿ, ಎ.11 (DaijiworldNews/PY): ಕೊರೊನಾ ವೈರಸ್ನ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದ್ದು, ಅದರಂತೆ ಪ್ರಧಾನಿ ಮೋದಿ ಅವರ ಕರೆಯ ಮೇರೆಗೆ ದೇಶದಾದ್ಯಂತ ಎಪ್ರಿಲ್ 11ರಿಂದ ನಾಲ್ಕು ದಿನಗಳವರೆಗೆ ನಡೆಯುವ ಕೊರೊನಾ ಲಸಿಕೆ ಉತ್ಸವಕ್ಕೆ ಚಾಲನೆ ನೀಡಲಾಗಿದೆ.
ಸಾಂದರ್ಭಿಕ ಚಿತ್ರ
ಎಪ್ರಿಲ್ 11ರಿಂದ ಎಪ್ರಿಲ್ 14ರವರೆಗೆ ಸಾರ್ವತ್ರಿಕಾ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಅರ್ಹ ಮಂದಿಗೆ ಕೊರೊನಾ ವೈರಸ್ ಲಸಿಕೆ ನೀಡಿವ ಉದ್ದೇಶ ಹೊಂದಲಾಗಿದೆ.
ಜ್ಯೋತಿಬಾ ಫುಲೆ ಅವರ ಜನ್ಮ ದಿನವಾದ ಎಪ್ರಿಲ್ 11ರಿಂದ ಅಂಬೇಡ್ಕರ್ ಜಯಂತಿಯಾದ ಎಪ್ರಿಲ್ 14ರವರೆಗೆ ಕೊರೊನಾ ಲಸಿಕಾ ಉತ್ಸವದ ಘೋಷಣೆ ಮಾಡಲಾಗಿದ್ದು, ದೇಶದ ಮೂಲೆ ಮೂಲೆಗೂ ಕೊರೊನಾ ಲಸಿಕಾ ಅಭಿಯಾನವನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಇಂದಿನಿಂದ ನಾವು ಟೀಕಾ ಉತ್ಸವವನ್ನು ದೇಶಾದ್ಯಂತ ಪ್ರಾರಂಭಿಸುತ್ತಿದ್ದೇವೆ. ಕೊರೊನಾ ವಿರುದ್ದದ ಹೋರಾಟಕ್ಕೆ ಎಲ್ಲರೂ ಸಹಕರಿಸಿ. ದೇಶದ ಜನರು ನಾಲ್ಕು ವಿಷಯಗಳಿಗೆ ಬದ್ದರಾಗಿ ಎಂದು ಮನವಿ ಮಾಡುತ್ತೇನೆ" ಎಂದಿದ್ದಾರೆ.
"ಲಸಿಕೆ ಪಡೆಯಲು ಸಹಾಯ ಮಾಡುವವರಿಗೆ ನೆರವಾಗಿ. ಕೊರೊನಾ ಚಿಕಿತ್ಸೆ ವೇಳೆ ಜನರಿಗೆ ಸಹಾಯ ಮಾಡಿ. ಮಾಸ್ಕ್ ಧರಿಸಿ, ಇತರರಿಗೂ ಮಾಸ್ಕ್ ಧರಿಸುವಂತೆ ತಿಳಿಸಿ. ಯಾರಿಗಾದರೂ ಕೊರೊನಾ ಸೋಂಕು ದೃಢಪಟ್ಟಲ್ಲಿ ಆ ಪ್ರದೇಶವನ್ನು ಸೂಕ್ಷ್ಮ ಕಂಟೈನ್ಮೆಂಟ್ ಝೋನ್ ಎಂದು ಸೃಷ್ಟಿ ಮಾಡಿ" ಎಂದು ತಿಳಿಸಿದ್ದಾರೆ.