ಕೋಲ್ಕತ್ತ, ಏ.11 (DaijiworldNews/MB) : ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಮಾತನಾಡಿರುವುದು ಎನ್ನಲಾದ ಆಡಿಯೊ ಕ್ಲಿಪ್ ಬಹಿರಂಗವಾಗಿದ್ದು ಇದರಲ್ಲಿ ಪಶ್ಚಿಮ ಬಂಗಾಳದಲ್ಲಿ ದೀದಿಯಷ್ಟೇ (ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ) ಮೋದಿಯೂ ಜನಪ್ರಿಯ ಎಂದು ಪ್ರಶಾಂತ್ ಕಿಶೋರ್ ಅವರು ಹೇಳಿದ್ದಾರೆ ಎನ್ನಲಾಗಿದೆ.
ಕಿಶೋರ್ ಅವರು ಕ್ಲಬ್ಹೌಸ್ನಲ್ಲಿ ಕೆಲವು ಪತ್ರಕರ್ತರೊಂದಿಗೆ ಆ್ಯಪ್ನಲ್ಲಿ ಸಂವಾದ ನಡೆಸಿದ್ದಾರೆ ಎಂದು ಹೇಳಲಾದ ಸಂವಾದದ ಆಯ್ದ ಭಾಗಗಳನ್ನು ಬಿಜೆಪಿಯ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಬಹಿರಂತ ಪಡಿಸಿದ್ದು, ಇನ್ನು ಟಿಎಂಸಿ ಚುನಾವಣೆ ಕತೆ ಮುಗಿಯಿತು ಎಂದು ಲೇವಡಿ ಮಾಡಿದ್ದಾರೆ.
ಹಾಗೆಯೇ ಬಂಗಾಳದಲ್ಲಿ ಟಿಎಂಸಿಗೆ ಆಡಳಿತ ವಿರೋಧಿ ಅಲೆ ಎದ್ದಿದ್ದು ಟಿಎಂಸಿ ಆಂತರಿಕ ಸಮೀಕ್ಷೆಯ ಪ್ರಕಾರ ಬಿಜೆಪಿ ಈ ಬಾರಿ ಗೆಲ್ಲಲಿದೆ. ಪರಿಶಿಷ್ಟ ಜಾತಿ ಹಾಗೂ ಮಥುಆ ಸಮುದಾಯದವರು ಬಿಜೆಪಿಗೆ ಮತಹಾಕುತ್ತಿದ್ದಾರೆ ಎಂದು ಚುನಾವಣಾ ತಂತ್ರಜ್ಞರೇ ಒಪ್ಪಿಕೊಂಡಿದ್ದಾರೆ ಎಂದು ಧ್ವನಿಮುದ್ರಿಕೆ ಬಿಡುಗಡೆ ಬಳಿಕ ಮಾಳವೀಯ ಹೇಳಿದ್ದಾರೆ.
ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್, ಕ್ಲಬ್ಹೌಸ್ನಲ್ಲಿ ನಾನು ಪತ್ರಕರ್ತರೊಂದಿಗೆ ನಡೆಸಿದ್ದೇನೆ ಎಂದು ಹೇಳಲಾಗುತ್ತಿರುವ ಸಂವಾದದ ಪೂರ್ಣಪಾಠವನ್ನು ಬಹಿರಂಗ ಮಾಡಿ ಎಂದು ಅಮಿತ್ ಮಾಳವೀಯಗೆ ಸವಾಲು ಹಾಕಿರುವ ಅವರು, ಈ ಚುನಾವಣೆಯಲ್ಲಿ ಬಿಜೆಪಿ 100 ಸೀಟುಗಳನ್ನೂ ಗೆಲ್ಲಲ್ಲ ಎಂದಿದ್ದಾರೆ.