ಭೋಪಾಲ್, ಎ.11 (DaijiworldNews/PY): ಆರು ವರ್ಷದ ಬಾಲಕಿಯ ಮೇಲೆ ಆಕೆಯ ಅಜ್ಜ ಹಾಗೂ ಇನ್ನೋರ್ವ ವ್ಯಕ್ತಿ ಬಾಲಕಿಯ ಮೂರು ವರ್ಷದ ಸಹೋದರ ಮುಂದೆಯೇ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್ನ ಕೋಲಾರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಅತ್ಯಾಚಾರ ಎಸಗಿದ ವೇಳೆ ಇಬ್ಬರು ಆರೋಪಿಗಳು ಸಂತ್ರಸ್ತೆಗೆ 20 ರೂ.ಗಳನ್ನು ನೀಡಿ ಘಟನೆಯನ್ನು ಯಾರಿಗೂ ತಿಳಿಸಬಾರದು ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಬಾಲಕಿಯ ತಾಯಿ ಮಗಳ ನಡವಳಿಕೆಯಲ್ಲಿ ಬದಲಾವಣೆಗಳನ್ನು ಗಮನಿಸಿದಾಗ ಹಾಗೂ ಘಟನೆಯ ಬಗ್ಗೆ ಹೇಳಲು ಆಕೆಯನ್ನು ಒತ್ತಾಯಿಸಿದ ಸಂದರ್ಭ ಈ ಘಟನೆ ಬೆಳಕಿಗೆ ಬಂದಿದೆ.
"ಬಾಲಕಿ ಕಳೆದ ಹಲವಾರು ದಿನಗಳಿಂದ ಅನುಭವಿಸುತ್ತಿರುವ ನೋವಿನ ಬಗ್ಗೆ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಬಟ್ಟೆ ತೊಳೆಯುವ ಮೂಲಕ ಏನನ್ನಾದರೂ ಮರೆಮಾಚಲು ಪ್ರಯತ್ನಿಸುತ್ತಿದ್ದಾಳೆ ಎಂದು ತಿಳಿದ ಬಳಿಕ ಆಕೆ ತಾಯಿ ಮಗುವನ್ನು ಎಲ್ಲವನ್ನೂ ಹೇಳಲು ಪುಸಲಾಯಿಸಿದಳು" ಎಂದು ಪೊಲೀಸರು ಹೇಳಿದ್ದಾರೆ.
"ಸುಮಾರು ಎಂಟು ದಿನಗಳ ಹಿಂದೆ, ಅವಳ ಅಂಕಲ್ ಅವಳನ್ನು ಹಾಗೂ ಅವಳ ಕಿರಿಯ ಸಹೋದರನನ್ನು ಕರೆದು ಸಮೋಸ ನೀಡಲಾಗುವುದು ಎಂದು ಕೋಣೆಗೆ ಕರೆದೊಯ್ದರು ಎಂದು ಬಾಲಕಿ ತನ್ನ ತಾಯಿಯ ಬಳಿ ಹೇಳಿದ್ದಾಳೆ. ಆಕೆಯ ಅಜ್ಜ ಈಗಾಗಲೇ ಕೋಣೆಯಲ್ಲಿ ಇದ್ದರು. ಅವರು ಆಕೆಯ ಮೇಲೆ ಅತ್ಯಾಚಾರ ವೆಸಗಿದ್ದಾರೆ" ಎಂದು ಕೋಲಾರ ಪೊಲೀಸರು ಹೇಳಿದ್ದಾರೆ.
"ಸಂತ್ರಸ್ತೆಗೆ ರಕ್ತಸ್ರಾವವಾಗುತ್ತಿದೆ ಎಂದು ತಿಳಿದ ಅವರು ಆಕೆಗೆ ಸಮೋಸ ಹಾಗೂ 20 ರೂ.ಗಳನ್ನು ನೀಡಿದ ಬಳಿಕ ಆಕೆಯನ್ನು ಬಿಟ್ಟರು. ವಿಚಾರವನ್ನು ಯಾರಿಗೂ ಬಹಿರಂಗಪಡಿಸಬಾರದು ಎಂದು ಆಕೆಗೆ ಬೆದರಿಕೆ ಹಾಕಿದ್ದರು. ಆಕೆ ತುಂಬಾ ಭಯಗೊಂಡಿದ್ದಳು. ಆದ್ದರಿಂದ ಆಕೆ ಮೌನವಾಗಿದ್ದಳು" ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ಅಜ್ಜ ಹಾಗೂ ಸಂಜಯ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿಗಳಿಬ್ಬರೂ ಕೂಲಿ ಕಾರ್ಮಿಕರಾಗಿದ್ದು, ಮದ್ಯ ವ್ಯಸನಿಗಳಾಗಿದ್ದರು. ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.