ಬೆಂಗಳೂರು, ಏ.11 (DaijiworldNews/MB) : ರಾಜ್ಯದ ಎಂಟು ಪ್ರಮುಖ ನಗರದಲ್ಲಿ ಶನಿವಾರದಿಂದ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ಕರ್ಫ್ಯೂ ವಿಧಿಸಲಾಗಿದೆ. ಆದರೆ ಇದು ರಾತ್ರಿ ಪಾಳಿಯ ನೌಕರರಿಗೆ ಗೊಂದಲವನ್ನುಂಟು ಮಾಡಿತ್ತು. ಆದರೆ ಈಗ ರಾತ್ರಿಪಾಳಿಯ ನೌಕರರಿಗೆ ಕೆಲವು ಷರತ್ತುಗಳ ಮೇಲೆ ಕೆಲಸಕ್ಕೆ ಹೋಗಿ ಬರಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ರಾತ್ರಿಪಾಳಿಯ ಕೆಲಸಗಾರರನ್ನು ಕರೆದೊಯ್ಯುವ ಸಂಸ್ಥೆಯ ವಾಹನಗಳಲ್ಲಿ ಆ ಸಂಬಂಧ ಆಯಾ ಕಂಪನಿಗಳಿಂದ ಅಧಿಕೃತ ಪತ್ರ ಇರಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಹಾಗೆಯೇ ರಾತ್ರಿ ಪಾಳಿಯ ಕೆಲಸದ ಮೇಲೆ ಓಡಾಡುವ ನೌಕರರು ತಮ್ಮ ಕಂಪನಿಗಳಿಂದ ನೀಡಲಾಗಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು. ಜತೆಗೆ ಸಂಚಾರ ವೇಳೆ ಎಲ್ಲಾ ಕೊರೊನಾ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಪಿ. ರವಿ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯದ ಎಂಟು ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಮಂಗಳೂರು,ಕಲಬುರಗಿ, ಬೀದರ್ ,ತುಮಕೂರು, ಉಡುಪಿ, ಮಣಿಪಾಲದಲ್ಲಿ ಶನಿವಾರದಿಂದ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.