ಬೀದರ್, ಏ.10 (DaijiworldNews/MB) : ಸಾರಿಗೆ ವ್ಯವಸ್ಥೆಯು ರಾಜ್ಯದಲ್ಲಿ ನಾಲ್ಕು ದಿನಗಳಲ್ಲಿ ಸಹಜ ಸ್ಥಿತಿಗೆ ಬರಲಿದ್ದು ಈ ಹಿನ್ನೆಲೆ ಎಸ್ಮಾ ಜಾರಿ ಮಾಡುವ ಸ್ಥಿತಿಯೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ಹುಮನಾಬಾದ್ನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಕೆಲ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ಕರೆ ಮಾಡುತ್ತಿದ್ದಾರೆ. ಆದರೆ ನೌಕರರ ಸಂಘದ ಸದಸ್ಯರು ಬೆದರಿಕೆ ಹಾಕುತ್ತಿರುವ ಹಿನ್ನೆಲೆ ಅವರು ಭಯಗೊಂಡು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ'' ಎಂದು ಹೇಳಿದರು.
''ನಾವು ನೌಕರರಿಗೆ ಬೆದರಿಕೆ ಹಾಕಿಲ್ಲ, ಕರ್ತವ್ಯಕ್ಕೆ ಹಾಜರಾಗದಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದಷ್ಟೇ ಹೇಳಿದ್ದೇವೆ'' ಎಂದೂ ಇದೇ ವೇಳೆ ಹೇಳಿದರು.
ಇನ್ನು ''ನಾಲ್ಕು ದಿನಗಳ ಮುಷ್ಕರದಿಂದಾಗಿ ಈ ತಿಂಗಳು ಸಂಬಳ ನೀಡಲು ಕೂಡಾ ನಿಗಮದ ಬಳಿ ಹಣವಿಲ್ಲ. ಮತ್ತೆ ಈ ನಿಗಮದ ನೆರವಿಗೆ ಸರ್ಕಾರ ಧಾವಿಸಬೇಕಾಗಿದೆ. ಈ ಮುಷ್ಕರದಿಂದಾಗಿ ಬಡವರು, ಮಧ್ಯಮ ವರ್ಗದವರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಉಂಟಾಗುತ್ತಿದೆ'' ಎಂದು ಹೇಳಿದರು.
ಇದೇ ವೇಳೆ, ''ಇನ್ನು ನಾಲ್ಕು ದಿನಗಳಲ್ಲಿ ಸಾರಿಗೆ ವ್ಯವಸ್ಥೆಯು ಸಹಜ ಸ್ಥಿತಿಗೆ ಬರಲಿದೆ. ಶುಕ್ರವಾರ 900 ಬಸ್, ಶನಿವಾರ 1500 ಬಸ್ಗಳು ಸಂಚಾರ ಮಾಡಿದೆ. ಭಾನುವಾರ 2 ಸಾವಿರ ಬಸ್ಗಳು ಸಂಚರಿಸಲಿದೆ. ಸೋಮವಾರದ ವೇಳೆಗೆ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಾರೆ'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.
''ಪ್ರಸ್ತುತ ಮುಷ್ಕರದಿಂದಾಗಿ ಯಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೂ ತೊಂದರೆ ಉಂಟಾಗಿದೆ. ಜನರಿಗೆ ಆಗುವ ಕಷ್ಟವನ್ನು ನೌಕರರು ಅರ್ಥ ಮಾಡಿಕೊಳ್ಳಬೇಕು'' ಎಂದು ಮನವಿ ಮಾಡಿದರು.
ಇನ್ನು, ''ರಾಜಕೀಯದಲ್ಲಿ ಕೆಲವರು ಬೆಂಕಿ ಹತ್ತಿದಾಗ ತೆನೆ ಸುಟ್ಟುಕೊಳ್ಳುತ್ತಿರುವವರು ಇದ್ದಾರೆ. ಬೇರೊಬ್ಬರ ಕೈಗೆ ಮಸಿ ಬಳಿಯಲು ಹೋದಾಗ ನಮ್ಮ ಕೈಗೂ ಮಸಿ ಆಗುತ್ತದೆ ಎಂದು ನೆನೆಪಿರಲಿ. ಈ ಮುಷ್ಕರಕ್ಕೆ ಡಿ.ಕೆ.ಶಿವಕುಮಾರ್ ಕುಮ್ಮಕ್ಕು ನೀಡುತ್ತಿದ್ದು ರಾಜಕೀಯ ಮಾಡುತ್ತಿದ್ದಾರೆ'' ಎಂದು ದೂರಿದರು.