ತಿರುವನಂತಪುರಂ, ಏ.10 (DaijiworldNews/HR): ಕೇರಳ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಅವರನ್ನು ಡಾಲರ್ ಅಕ್ರಮ ಸಾಗಣೆ ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 5 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಅವರಿಗೆ ಈ ಹಿಂದೆಯೇ ವಿಚಾರಣೆಗೆ ಹಾಜರಾಗಬೇಕೆಂದು ಅನೇಕ ಬಾರಿ ನೊಟೀಸ್ ಜಾರಿಗೊಳಿಸಲಾಗಿತ್ತಾದರೂ ಆರೋಗ್ಯದ ಕಾರಣಗಳನ್ನು ನೀಡಿ ಅವರು ವಿಚಾರಣೆಗೆ ಬಂದಿರಲಿಲ್ಲ. ಹಾಗಾಗಿ ಸ್ಪೀಕರ್ ಅಧಿಕೃತ ನಿವಾಸಕ್ಕೆ ತೆರಳಿದ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಇನ್ನು 5 ಗಂಟೆಗಳ ಕಾಲ ವಿಚಾರಣೆ ನಡೆದಿದ್ದು ಅಗತ್ಯ ಎದುರಾದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗಬೇಕೆಂದು ಕಸ್ಟಮ್ಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಸ್ವಪ್ನ ಸುರೇಶ್ ಹಾಗೂ ಸರಿತ್ ಪಿಎಸ್ ಎಂಬುವವರ ಹೇಳಿಕೆಯಿಂದಾಗಿ ಡಾಲರ್ಸ್ ಅಕ್ರಮ ಸಾಗಣೆ ಪ್ರಕರಣದಲ್ಲಿ ಸ್ಪೀಕರ್ ವಿರುದ್ಧ ಆರೋಪ ಕೇಳಿಬಂದಿದ್ದು, ತಿರುವನಂತಪುರಂ ನಲ್ಲಿ ಯುಎಇಯ ಪ್ರತಿನಿಧಿಗೆ ಸ್ಪೀಕರ್ ಕರೆನ್ಸಿಗಳನ್ನು ಇಟ್ಟಿದ್ದ ಬ್ಯಾಗ್ ಅನ್ನು ನೀಡಿದ್ದರು ಎಂದು ಇಬ್ಬರೂ ಮಾಹಿತಿಯನ್ನು ಬಹಿರಂಗಪಡಿಸಿದ್ದರು.