ಬೆಳಗಾವಿ, ಏ.10 (DaijiworldNews/HR): ದೇಶ ಉಳಿಯಬೇಕಾದರೆ ಮೋದಿ ಸರ್ಕಾರ ಕಿತ್ತೊಗೆಯಬೇಕು, ಹಿಟ್ಲರ್ ಮಾಡುತ್ತಿದ್ದ ಕೆಲಸವನ್ನು ಈಗ ಮೋದಿ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "56 ಇಂಚಿನ ಎದೆ ಮುಖ್ಯವಲ್ಲ, ಅದರಲ್ಲಿ ಹೃದಯವಿರಬೇಕು. ಬೆಲೆ ಏರಿಕೆ ಬಗ್ಗೆ ಮೋದಿ ಮಾತನಾಡುತ್ತಿಲ್ಲ. ಕಾಶ್ಮೀರ, ಪುಲ್ವಾಮಾ ಬಗ್ಗೆಯೇ ಮಾತನಾಡುತ್ತಾರೆ. ಮಾತು ಎತ್ತಿದರೆ ನನಗೆ 56 ಇಂಚಿನ ಎದೆ ಇದೆ ಅಂತಾರೆ" ಎಂದರು.
ಇನ್ನು "ಸುರೇಶ್ ಅಂಗಡಿ ಈ ಕ್ಷೇತ್ರಕ್ಕೆ ನೆನಪಿಟ್ಟುಕೊಳ್ಳುವ ಕೆಲಸ ಮಾಡಿಲ್ಲ, ಬೆಳಗಾವಿಯಲ್ಲಿ ಪ್ರವಾಹ ಬಂದಾಗ ಪರಿಹಾರ ಕೊಡಲಿಲ್ಲ. ನರೇಂದ್ರ ಮೋದಿ ಕೂಡ ಒಂದು ರೂಪಾಯಿ ಪರಿಹಾರವನ್ನೂ ಕೊಡಲಿಲ್ಲ. ಸಂಸದರಾಗಿದ್ದ ಸುರೇಶ್ ಅಂಗಡಿ ಕೂಡಾ ಪರಿಹಾರ ಕೇಳಲಿಲ್ಲ. ಇವರು ಹೇಡಿ ಸಂಸದರು, ಬಿಎಸ್ವೈ ಹೇಡಿ ಮುಖ್ಯಮಂತ್ರಿ. ನಾನು ಮುಖ್ಯಮಂತ್ರಿ ಆಗಿದ್ದರೆ ಮೋದಿ ಮನೆ ಮುಂದೆ ಧರಣಿ ಮಾಡಿ ಪರಿಹಾರ ತರುತ್ತಿದ್ದೆ" ಎಂದಿದ್ದಾರೆ.
ಸಾರಿಗೆ ನೌಕರರ ಮುಷ್ಕರ ನಾಲ್ಕು ದಿನದಿಂದ ನಡೆಯುತ್ತಿದ್ದು, ಸವದತ್ತಿಯಲ್ಲಿ ನಿನ್ನೆ ಒಬ್ಬ ನೌಕರ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಕಷ್ಟ ಕೇಳಿ ಪರಿಹಾರ ಕೊಡುವುದು ಬಿಟ್ಟು ಎಸ್ಮಾ ಜಾರಿ ಮಾಡುತ್ತೇವೆ, ಖಾಸಗಿ ಬಸ್ ಓಡಿಸ್ತೀವಿ ಅಂತಾರೆ" ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.