ಕೋಲ್ಕತಾ, ಎ.10 (DaijiworldNews/MB) : ಪಶ್ಚಿಮ ಬಂಗಾಳದ ಕೂಚ್ಬಿಹಾರ್ ಜಿಲ್ಲೆಯ ಸಿತಾಲ್ಕುಚಿ ಗ್ರಾಮದಲ್ಲಿ ಸಿಐಎಸ್ಎಫ್ನ ಗುಂಡಿನ ದಾಳಿಗೆ ನಾಲ್ವರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ''ನಮ್ಮ ಆತಂಕ ನಿಜವಾಗಿದೆ'' ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮತದಾನದ ವೇಳೆ ಸ್ಥಳೀಯರು ಸಿಐಎಸ್ಎಫ್ ಸಿಬ್ಬಂದಿಗೆ ಘೇರಾವ್ ಹಾಕಿ, ಬಂದೂಕುಗಳನ್ನು ಕಸಿದುಕೊಳ್ಳಲು ಮುಂದಾದ ವೇಳೆ ಸಿಐಎಸ್ಎಫ್ನವರು ಗುಂಡು ಹಾರಿಸಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿದ ದೀದಿ, ''ಕೇಂದ್ರ ಭದ್ರತಾ ಪಡೆಗಳ ಮೇಲೆ ಗೃಹ ಸಚಿವರು ಪ್ರಭಾವಬೀರುತ್ತಿದ್ದಾರೆ. ಬಿಜೆಪಿ ಸೋಲುವ ಭಯದಿಂದ ಈ ಕೃತ್ಯ ಮಾಡಿಸಿದ್ದಾರೆ. ಮತದಾರರನ್ನು ಬೆದರಿಸಲು ಕೇಂದ್ರ ಭದ್ರತಾ ಪಡೆಗೆ ಅಮಿತ್ ಶಾ ಏಕೆ ಸೂಚಿಸುತ್ತಿದ್ದಾರೆ'' ಎಂದು ಪ್ರಶ್ನಿಸಿದ್ದಾರೆ.
''ನಾವು ಬಿಜೆಪಿಯ ಈ ಕೃತ್ಯಕ್ಕೆ ಸೇಡು ತೀರಿಸಬೇಕಾಗಿದ್ದು ಅದು ಬಿಜೆಪಿಯ ವಿರುದ್ದದ ಮತದಾನದಿಂದಾಗಿ ಮಾತ್ರ ಸಾಧ್ಯ'' ಎಂದೂ ಹೇಳಿದ್ದಾರೆ.
''ನಾಲ್ವರನ್ನು ಇಂದು ಹತ್ಯೆ ಮಾಡಲಾಗಿದೆ. ಮತದಾನದ ಸಾಲಿನಲ್ಲಿ ನಿಂತಿದ್ದ ನಾಲ್ವರನ್ನು ಸಿಆರ್ಪಿಎಫ್ ಕೊಂದಿದೆ. ಬಿಜೆಪಿ ಸೋಲುವ ಭಯದಿಂದ ಹಾಗಾಗಿ ಮತದಾರರನ್ನು ಕೊಲ್ಲುತ್ತಿದೆ. ನಾನು ಎಲ್ಲರಲ್ಲೂ ಶಾಂತಿ ಕಾಪಾಡಲು ಮನವಿ ಮಾಡುತ್ತೇನೆ'' ಎಂದು ತಿಳಿಸಿದ್ದಾರೆ.