ರಾಯಚೂರು, ಎ.10 (DaijiworldNews/MB) : ''ಉಪಚುನಾವಣೆ ಬಳಿಕ ಎಲ್ಲಿಯೂ ಕಾಂಗ್ರೆಸ್ನ ವಿಳಾಸವೇ ಇರಲ್ಲ'' ಎಂದು ಹೇಳಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ''ಈಗ ಎಲ್ಲ ಕಡೆಯೂ ಬಿಜೆಪಿಯ ಗಾಳಿ ಬೀಸುತ್ತಿದೆ'' ಎಂದರು.
ಶನಿವಾರ ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ತುರ್ವಿಹಾಳದಲ್ಲಿ ನಡೆದ ಬಿಜೆಪಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
''ಜಾತಿಯ ವಿಷಬೀಜ ಬಿತ್ತಿ ಗೆಲ್ಲುವ ಭ್ರಮೆಯಲ್ಲಿ ಕಾಂಗ್ರೆಸ್ನವರು ಇದ್ದು ಆದರೆ 25 ಸಾವಿರ ಮತಗಳ ಅಂತರದಿಂದ ಪ್ರತಾಪಗೌಡ ಗೆಲುವು ಖಚಿತ. ನೀವೇ ಅಭ್ಯರ್ಥಿ ಎಂದು ತಿಳಿದು ಕಮಲಕ್ಕೆ ಮತ ನೀಡಿ. ಪ್ರತಾಪಗೌಡ ಪಾಟೀಲರಿಗೆ ಇಲ್ಲಿ ಸೇವೆ ಮಾಡಲು ಅವಕಾಶ ನೀಡಿ'' ಎಂದು ಮನವಿ ಮಾಡಿದರು.
''ನಾವು ಮುಸ್ಲಿಂ ವಿರೋಧಿಗಳಲ್ಲ'' ಎಂದು ಹೇಳಿದ ಅವರು, ''ಸರ್ಕಾರದಿಂದ ವೃದ್ಧರಿಗೆ, ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡಲಾಗಿದೆ. ರೈತರ ಬೇಡಿಕೆಯಂತೆ ಭತ್ತ ಖರೀದಿ ಕೇಂದ್ರ ಆರಂಭ ಮಾಡಲು ಸೂಚನೆ ನೀಡಲಾಗುತ್ತದೆ'' ಎಂದು ಹೇಳಿದರು.