ಕಣ್ಣೂರು, ಏ 10 (DaijiworldNews/MS): ಕೇರಳ ಮೂಲದ ಸನ್ಯಾಸಿನಿಯೊಬ್ಬರ ಹೆಸರನ್ನು ರೋಮ್ ನಲ್ಲಿರುವ ರಸ್ತೆಯೊಂದಕ್ಕೆ ನಾಮಕರಣ ಮಾಡುವ ಮೂಲಕ ಅಲ್ಲಿನ ಸ್ಥಳೀಯಾಡಳಿತ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರ ಸೇವೆಯನ್ನು ಗುರುತಿಸಿ ಗೌರವಿಸಿದೆ. ಇಂತಹ ಗೌರವವನ್ನು ಪಡೆದವರು ಕೇರಳದ ಕಣ್ಣೂರಿನ ಮೂಲದ ಪ್ರಸ್ತುತ ರೋಮ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಸ್ಟರ್ ತೆರೇಸಾ ವೆಟ್ಟಾಥ್.
ರೋಮ್ ನ ಮದರ್ ಜೋಸೆಫೀನ್ ವನ್ನಿನಿ ಆಸ್ಪತ್ರೆಯ ಸರ್ಜರಿ ಹೆಡ್ ಆಫೀಸ್ ಬಳಿಯ ರಸ್ತೆಗೆ ಸಿಸ್ಟರ್ ತೆರೇಸಾ ವೆಟ್ಟಾಥ್ ಅವರ ಹೆಸರನ್ನು ಇರಿಸಲಾಗಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ ರೋಗಿಗಳನ್ನು ನೋಡಿಕೊಂಡಿದ್ದಕ್ಕಾಗಿ ರೋಮ್ ನಗರದ ಅಧಿಕಾರಿಗಳು ಸಿಸ್ಟರ್ ತೆರೇಸಾ ಅವರನ್ನು ಮಹಿಳಾ ದಿನದಂದು ಗೌರವಿಸಿದ್ದರು.
ಇವರಲ್ಲದೆ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಶ್ರಮಿಸಿದ ಹಲವಾರು ಮಹಿಳಾ ದಾದಿಯರಿಗೆ ಇಟಲಿ ಈ ಮೂಲಕ ಗೌರವ ಸಲ್ಲಿಸಿದೆ. ರೋಮ್ ನಗರದ ಸಮೀಪವಿರುವ ಸ್ಯಾಕ್ರೊ ಬಾನೊ ಪುರಸಭೆಯು ಮಹಿಳಾ ದಾದಿಯರ ಹೆಸರುಗಳನ್ನು ರಸ್ತೆಗಳಿಗೆ ಮರುನಾಮಕರಣ ಮಾಡಿದೆ.
ಆಸ್ಪತ್ರೆಯನ್ನು ಕೋವಿಡ್ ಕೇಂದ್ರವನ್ನಾಗಿ ಪರಿವರ್ತಿಸಿದಾಗ, ಸಿಸ್ಟರ್ ತೆರೇಸಾ ಇದರ ಉಸ್ತುವಾರಿ ವಹಿಸಿದ್ದರು. ಅವರು ಸೇರಿದಂತೆ ಒಟ್ಟು 8 ದಾದಿಯರನ್ನು ಪುರಸಭೆ ಗೌರವಿಸಿತು. ತೆರೇಸಾ ಕಳೆದ 30 ವರ್ಷಗಳಿಂದ ಇಟಲಿಯಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಣ್ಣೂರಿನ ಕೊಟ್ಟಿಯೂರ್ನ ನೆಲ್ಲಿಯೋಡಿಯಿಂದ ಬಂದಿರುವ ಅವರು ದಿವಂಗತ ಮಾಥಾಯಿ ಮತ್ತು ಮೇರಿಯ ಪುತ್ರಿಯಾಗಿದ್ದಾರೆ. ಇವರು ಸೇಂಟ್ ಕ್ಯಾಮಿಲಸ್ ಚರ್ಚ್ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ.