ಒಡಿಶಾ, ಏ 10 (DaijiworldNews/MS): ಕೆಂಪಿರುವೆಗಳನ್ನು ಬಳಸಿ ತಯಾರಿಸಿದ ಕುಕುಟಿ ಚಟ್ನಿಯಿಂದ ಕೊರೊನಾ ಸೋಂಕು ತಡೆಗಟ್ಟಬಹುದು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಒಡಿಶಾ ಹೈಕೋರ್ಟ್ ವಜಾಗೊಳಿಸಿ , ಬುಡಕಟ್ಟು ಸಮುದಾಯಗಳು ಕೆಂಪಿರುವೆ ಚಟ್ನಿ ಅಥವಾ ಸೂಪ್ ಬಳಸುವುದು ಅವರ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯನ್ನು ಆಧರಿಸಿದ್ದು ಅದಕ್ಕೆ ಪ್ರತಿಕ್ರಿಯಿಸಲು ನ್ಯಾಯಾಲಯ ಸಜ್ಜುಗೊಂಡಿಲ್ಲ ಎಂದು ಹೇಳಿದೆ.
ಅರ್ಜಿದಾರರು ಮಯೂರ್ಭಂಜ್ ಜಿಲ್ಲೆಯ ತಕತ್ಪುರದ ಸಹಾಯಕ ಸಿವಿಲ್ ಎಂಜಿನಿಯರ್ ಆಗಿದ್ದಾರೆ. ಬತುಡಿ ಬುಡಕಟ್ಟು ಸಮುದಾಯಕ್ಕೆ ಸೇರಿರುವ ಅವರು ಹಸಿರು ಮೆಣಸಿನಕಾಯಿಯೊಂದಿಗೆ ಕೆಂಪಿರುವೆಗಳನ್ನು ಬಳಸಿ ತಯಾರಿಸಲಾಗುವ ‘ಕಾಯ್ (ಕುಕುಟಿ) ಚಟ್ನಿ’ ರೋಗನಿರೋಧಕ ಶಕ್ತಿ ಹೆಚ್ಚಿಸುವ ದಿವ್ಯೌಷಧ ಎಂದು ಕೋರ್ಟ್ ನಲ್ಲಿ ವಾದಿಸಿದ್ದರು. ಆದರೆ ಅರ್ಜಿದಾರರು ಸಲ್ಲಿಸಿದ್ದ ಪತ್ರವನ್ನು ಕೇಂದ್ರ ಆಯುಷ್ ಸಚಿವಾಲಯ, ಸಿಎಸ್ಐಆರ್ ಈಗಾಗಲೇ ತಿರಸ್ಕರಿಸಿದ್ದವು. ಇದನ್ನು ಗಮನಿಸಿದ ನ್ಯಾಯಾಲಯ ತಜ್ಞ ಸಂಸ್ಥೆಗಳ ನಿರ್ಧಾರ ಕುರಿತು ಮೇಲ್ಮನವಿ ಸಲ್ಲಿಸುವ ಅರ್ಹತೆ ಅರ್ಜಿಗೆ ಇಲ್ಲ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಎಸ್ ಮುರಳೀಧರ್ ಮತ್ತು ನ್ಯಾಯಮೂರ್ತಿ ಬಿ.ಪಿ.ರೌತ್ರೆ ಅವರಿದ್ದ ಪೀಠ ಇಂತಹ ವಿಚಾರಗಳಿಗೆ ಪ್ರತಿಕ್ರಿಯೆ ನೀಡಲು ನ್ಯಾಯಾಲಯ ಯಾವ ರೀತಿಯಲ್ಲೂ ಸಜ್ಜುಗೊಂಡಿಲ್ಲ. ಇದು ತಜ್ಞ ಸಂಸ್ಥೆಗಳು, ಸಿಎಸ್ಐಆರ್ ಮತ್ತು ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿಗಳಿಗೆ ಬಿಡಬೇಕಾದ ಸಂಗತಿ” ಎಂದು ಹೇಳಿದೆ. ಅಲ್ಲದೆ ಅಧಿಕಾರಿಗಳಿಗೆ ಯಾವುದೇ ನೋಟಿಸ್ ನೀಡಲು ನಿರಾಕರಿಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.