ಬೆಳಗಾವಿ, ಏ.10 (DaijiworldNews/HR): ಸಾರಿಗೆ ನೌಕರರ ಜತೆ ಇಂದು ಸಭೆ ನಡೆಸಲಿದ್ದ ಕೋಡಿಹಳ್ಳಿ ಚಂದ್ರಶೇಖರನ್ನು ಬೆಳಗಾವಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕೋಡಿಹಳ್ಳಿ ಚಂದ್ರಶೇಖರ್ ಬೆಳಗಾವಿಯ ಸುವರ್ಣಸೌಧ ಬಳಿಯ ಸುವರ್ಣ ಗಾರ್ಡನ್ನಲ್ಲಿ ಸಭೆಗೆ ನಿರ್ಧರಿಸಿದ್ದರು. ಆದರೆ ಸಭೆಗೂ ಮುನ್ನವೇ ಖಾಸಗಿ ಹೋಟೆಲ್ನಲ್ಲಿದ್ದ ಕೋಡಿಹಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬೆಳಗಾವಿಯ ಹಿರೇಬಾಗೇವಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಸತತ ನಾಲ್ಕನೇ ದಿನವೂ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಇಂದು ಬೆಳಗಾವಿಗೆ ಕೋಡಿಹಳ್ಳಿ ಚಂದ್ರಶೇಖರ್ ಪ್ರಯಾಣ ಬೆಳೆಸಿ ಬೆಳಗಾವಿ ಹಾಗೂ ಗುಲ್ಬರ್ಗದಲ್ಲಿ ಸಾರಿಗೆ ಮುಖಂಡರು ಹಾಗೂ ನೌಕರರ ಸಭೆ ನಡೆಸಲಿದ್ದರು. ಆದರೆ ಮುಂಜಾಗ್ರತಾ ಕ್ರಮವಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಾರದೆಂದು ಬೆಳಗಾವಿ ಪೊಲೀಸರು ಕೋಡಿಹಳ್ಳಿ ಚಂದ್ರಶೇಖರನ್ನು ವಶಕ್ಕೆ ಪಡೆದಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಬಂಧನಕ್ಕೊಳಗಾದ ಬಳಿಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನನ್ನು ವಶಕ್ಕೆ ಪಡೆದಿರುವುದು ತಪ್ಪು. ನನ್ನನ್ನು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.