ಕಣ್ಣೂರು, ಏ 10 (DaijiworldNews/MS): ಬ್ಯಾಂಕ್ ಮ್ಯಾನೇಜರ್ ತಾನು ಕೆಲಸ ನಿರ್ವಹಿಸುವ ಕೆನರಾ ಬ್ಯಾಂಕ್ ಕೂತುಪರಂಬ ಶಾಖೆಯ ಕಚೇರಿಯಲ್ಲೇ ನೇಣಿಗೆ ಶರಣಾದ ಘಟನೆ ಏ.೯ ರಂದು ನಡೆದಿದೆ.
ಮೃತ ಬ್ಯಾಂಕ್ ಮ್ಯಾನೇಜರ್ ನ್ನು ತ್ರಿಶೂರ್ ಮನ್ನುತಿ ಮೂಲದ ಕೆ ಎಸ್ ಸ್ವಪ್ನಾ (40) ಎಂದು ಗುರುತಿಸಲಾಗಿದೆ. ಬ್ಯಾಂಕ್ ನೌಕರರು ಎಂದಿನಂತೆ ಶುಕ್ರವಾರ ಬೆಳಿಗ್ಗೆ 8.45 ರ ವೇಳೆಗೆ ಬ್ಯಾಂಕ್ಗೆ ಆಗಮಿಸಿದಾಗ ಸ್ವಪ್ನಾ ಸೀಲಿಂಗ್ ಪ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಜೀವ ಉಳಿಸಲಾಗಲಿಲ್ಲ.
ಬ್ಯಾಂಕ್ ವ್ಯವಸ್ಥಾಪಕಿ ಆತ್ಮಹತ್ಯೆಗೆ ಶರಣಾದ ಪ್ರಕರಣದ ಕುರಿತು ಕೂತುಪರಂಬ ಎಸಿಪಿ ಕೆ ಜಿ ಸುರೇಶ್ ಕುಮಾರ್ ಮತ್ತು ಎಸ್ಐ ಕೆ ಟಿ ಸಂದೀಪ್ ನೇತೃತ್ವದ ಪೊಲೀಸ್ ತಂಡ ಬ್ಯಾಂಕ್ ಪರಿಶೀಲನೆ ನಡೆಸಿದ್ದು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದೆ.
ಸಿಸಿಟಿವಿ ದೃಶ್ಯಾವಳಿಯಂತೆ ಸ್ವಪ್ನಾ ಬೆಳಿಗ್ಗೆ 8.10 ರ ವೇಳೆಗೆ ಕಚೇರಿ ತಲುಪಿ 8.17 ರ ವೇಳೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರಿಗೆ ಸ್ಪಪ್ಮಾ ಅವರ ಡೈರಿ ಪತ್ತೆಯಾಗಿದ್ದು, ಅದರಲ್ಲಿ ಕೆಲಸದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ಬರೆದಿದ್ದು ಇದು ಆತ್ಮಹತ್ಯೆಗೆ ಕಾರಣವಾಗಬಹುದು ಎಂದು ಎಸ್ಐ ಕೆ ಟಿ ಸಂದೀಪ್ ಅನುಮಾನ ವ್ಯಕ್ತಪಡಿಸಿದ್ದಾರೆ.
ತ್ರಿಶೂರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸ್ವಪ್ನ ಬಡ್ತಿ ಪಡೆದಿದ್ದು ಈ ಹಿನ್ನಲೆಯಲ್ಲಿ ಸೆಪ್ಟೆಂಬರ್ನಲ್ಲಿ ಕೂತ್ತುಪರಂಬಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇವರ ಪತಿ ಸಾಬು ಎರಡು ವರ್ಷಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಸ್ವಪ್ನಾ ಅವರ ಮಕ್ಕಳಾದ ನಿರಂಜನ್ ಮತ್ತು ನಿವೇದಿಕಾ ಇಬ್ಬರೂ ಕೇಂದ್ರಿಯ ವಿದ್ಯಾಲಯಲ್ಲಿ ಅಭ್ಯಾಸಿಸುತ್ತಿದ್ದಾರೆ.
ತಲಶೇರಿ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸ್ವಪ್ಮಾ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821