ಬೆಂಗಳೂರು, ಏ.10 (DaijiworldNews/HR): ಕೊರೊನಾ ಸಂಕಷ್ಟದ ನಡುವೆಯೂ ಸಾರಿಗೆ ನೌಕರರು ಅನೇಕ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸುತ್ತಿದ್ದಾರೆ. ಆದರೆ ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ ಮುಳುಗುತ್ತಿರುವ ಹಡಗುಗಳಾಗಿದ್ದು ಇವುಗಳನ್ನು ಇನ್ನಷ್ಟು ರಂಧ್ರ ತೋಡಿ ಮುಳುಗಿಸುತ್ತಿರುವುದು ಸರಿಯಲ್ಲ" ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಡೀ ದೇಶ, ರಾಜ್ಯ ಕಷ್ಟದಲ್ಲಿದ್ದು, ಸಂಬಳ ಕೊಡಲಿಕ್ಕಾಗದೆ ಅನೇಕ ರಾಜ್ಯಗಳು ಅಲ್ಲಿನ ಕಾರ್ಮಿಕರಿಗೆ ಶೇ.60 ಸಂಬಳ ಕೊಡುತ್ತಿದೆ. ಆದರೆ, ಕರ್ನಾಟಕದಲ್ಲಿ ಎಲ್ಲ ಕಾರ್ಮಿಕರಿಗೂ ಪೂರ್ತಿ ಸಂಬಳ ಕೊಟ್ಟಿದೆ. ಸಾರಿಗೆ ನೌಕರರಿಗೆ ಲಾಕ್ಡೌನ್ ಸಮಯದಲ್ಲೂ ಸಂಬಳ ಕೊಟ್ಟಿದ್ದೇವೆ" ಎಂದರು.
"ಸಾರಿಗೆ ಸಂಸ್ಥೆಗಳು ಮುಳುತ್ತಿರುವ ಹಡಗಿನಂತಿದೆ, ಇಂತಹ ಸಂದರ್ಭದಲ್ಲೂ ಸರ್ಕಾರ ಸಾಲ ಮಾಡಿ ಸಂಬಳ ಕೊಡುತ್ತಿದೆ. ಆದರೂ ಯಾರದ್ದೋ ಮಾತು ಕೇಳಿ ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದು ಸರಿಯಲ್ಲ" ಎಂದಿದ್ದಾರೆ.
ಇನ್ನು ಕೋಡಿಹಳ್ಳಿ ಚಂದ್ರಶೇಖರ್ನಿಂದಾಗಿ ಇಡೀ ರಾಜ್ಯದಲ್ಲಿ ರೈತರು ತಾವು ಬೆಳೆದ ಬೆಳೆ, ತರಕಾರಿಯನ್ನು ಮಾರುಕಟ್ಟೆಗೆ ತಂದು ಹಾಕಲಾಗದ ಸ್ಥಿತಿ ನಿರ್ಮಾಣವಾಗಿದ್ದು, ರೈತರು ಕಂಗಾಲಾಗಿದ್ದಾರೆ. ರೈತರಿಗೆ, ಜನಸಾಮಾನ್ಯರಿಗೆ ತೊಂದರೆ ಕೊಡೋದು ಸರಿಯಲ್ಲ" ಎಂದು ಹೇಳಿದ್ದಾರೆ.