ಮುಂಬೈ, ಏ. 09 (DaijiworldNews/HR): ಮುಕೇಶ್ ಅಂಬಾನಿಯವರ ಮನೆ ಸಮೀಪ ಸ್ಫೋಟಕ ತುಂಬಿದ್ದ ವಾಹನ ನಿಲ್ಲಿಸಿದ್ದ ಪ್ರಕರಣ ಹಾಗೂ ಉದ್ಯಮಿ ಮನ್ಸುಖ್ ಹಿರೇನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಏ. 23ರವರೆಗೆ ನ್ಯಾಯಾಂಗ ವಶಕ್ಕೆ ನೀಡಿ ಎನ್ಐಎ ವಿಶೇಷ ನ್ಯಾಯಾಲಯವು ಆದೇಶ ಹೊರಡಿಸಿದೆ.
ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಮಾರ್ಚ್ 13ರಂದು ಬಂಧಿಸಲಾಗಿದ್ದು, ಎನ್ಐಎ ವಿಚಾರಣೆ ಮುಗಿದ ಬಳಿಕ ವಾಜೆ ಅವರನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಇನ್ನು ವಿಶೇಷ ನ್ಯಾಯಾಧೀಶರಾದ ಪಿ.ಆರ್. ಸಿತ್ರೆ ಅವರು ವಾಜೆ ಅವರನ್ನು ಏ. 23ರ ತನಕ ನ್ಯಾಯಾಂಗ ವಶಕ್ಕೆ ನೀಡುವಂತೆ ಆದೇಶಿಸಿದರು.
ಮನ್ಸುಖ್ ಹಿರೇನ್ ಅವರನ್ನು ಹತ್ಯೆ ಮಾಡಲು ಯೋಜಿಸಲಾಗಿದ್ದ ಸಂಚಿನ ಸಭೆಯಲ್ಲಿ ಸಚಿನ್ ವಾಜೆ ಪಾಲ್ಗೊಂಡಿದ್ದ ಬಗ್ಗೆ ಎನ್ಐಎ ಮಾಹಿತಿ ಕಲೆ ಹಾಕಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ನ್ಯಾಯಾಲಯದ ಮುಂದಿಟ್ಟ ಎನ್ಐಎ, ಸ್ಫೋಟಕ ತುಂಬಿದ್ದ ವಾಹನ ನಿಲುಗಡೆ ಪ್ರಕರಣದಲ್ಲಿ ಹಿರೇನ್ ಕೂಡಾ ಸಂಚುಕೋರನಾಗಿದ್ದ ಎಂಬ ವಿಷಯವನ್ನೂ ನ್ಯಾಯಾಲಯದ ಗಮನಕ್ಕೆ ತಂದಿದೆ ಎನ್ನಲಾಗಿದೆ.