ಬೆಂಗಳೂರು, ಎ.09 (DaijiworldNews/PY): "ಬಿಜೆಪಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ. ವಿಧಾನಸೌಧದಲ್ಲಿ ಕೊಳ್ಳೆ ಹೊಡೆದ ಹಣವನ್ನು ಉಪಚುನಾವಣೆಯಲ್ಲಿ ಹರಿಸುತ್ತಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಬಿಜೆಪಿ ಸರ್ಕಾರ ರಚಿಸಿ 2 ವರ್ಷಗಳಾಗಿವೆ. ಜನತೆಯಲ್ಲಿ ಹೇಳಿಕೊಳ್ಳಲು ಎರಡೇ ಎರಡು ಜನಪರ ಯೋಜನೆಗಳಿಲ್ಲ. ಹೀಗಾಗಿ ಬಿಜೆಪಿ ಮತಗಳ ಖರೀದಿಗೆ ಇಳಿದಿದೆ, ಕಾರ್ಕೋಟಕ ವಿಷದಂತಿರುವ ಬಿಜೆಪಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ. ವಿಧಾನಸೌಧದಲ್ಲಿ ಕೊಳ್ಳೆ ಹೊಡೆದ ಹಣವನ್ನು ಉಪಚುನಾವಣೆಯಲ್ಲಿ ಹರಿಸುತ್ತಿದೆ" ಎಂದಿದೆ.
"ವಿಜಯೇಂದ್ರ ಉಪಚುನಾವಣೆಯ ಕ್ಷೇತ್ರಗಳಿಗೆ ಕಾಲಿಡುವುದೇ ಹಣ ತುಂಬಿದ ಸೂಟ್ಕೇಸ್ಗಳೊಂದಿಗೆ ರಾಜಾರೋಷವಾಗಿ ಬಿಜೆಪಿ ಮತದಾರರಿಗೆ ಹಣ, ಹೆಂಡ ಹಂಚುತ್ತಿದ್ದರೂ ತಾವು ಕಣ್ಮುಚ್ಚಿ ಕುಳಿತಿದ್ದೇಕೆ? ಕೂಡಲೇ ಜಿಲ್ಲಾ ಚುನಾವಣಾಧಿಕಾರಿಗಳನ್ನು ವಜಾಗೊಳಿಸಿ, ಬಿಜೆಪಿ ಪಕ್ಷದ ಅಕ್ರಮ ತಡೆಯಿರಿ" ಎಂದು ಆಗ್ರಹಿಸಿದೆ.
"ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಮೂರೂ ಉಪಚುನಾವಣಾ ಕ್ಷೇತ್ರಗಳಲ್ಲಿ ಬಿಜೆಪಿ ಹಣದ ಹೊಳೆಯನ್ನೇ ಹರಿಸುತ್ತಿದೆ. ವಿಧಾನಸೌಧದಲ್ಲಿ ವಸೂಲಿಯಾದ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ನ ಪಾಪದ ಹಣವನ್ನು ಮತಗಳ ಖರೀದಿಗೆ ಬಳಸಲಾಗುತ್ತಿದೆ. ಬಿಜೆಪಿ ಸಾಧನೆ ಹೇಳಿ ಮತ ಪಡೆಯಲಾಗದೆ, ಹಣ ನೀಡಿ ಮತ ಪಡೆಯುವ ನೀಚ ರಾಜಕಾರಣ ನಿಮಗೆ ಬೇಕೇ?" ಎಂದು ಕೇಳಿದೆ.