ಚಿಕ್ಕಮಗಳೂರು, ಎ.09 (DaijiworldNews/PY): ಹಿಂದೂ ಕಾರ್ಯಕರ್ತನೋರ್ವನ ಮೇಲೆ ಅನ್ಯಕೋಮಿನ ಯುವಕರ ತಂಡ ಹಲ್ಲೆ ಮಾಡಿದ್ದರಿಂದ ಗಂಭೀರ ಗಾಯಗೊಂಡ ಯುವಕ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
ಬಾಡಿ ಬಿಲ್ಡರ್ ಆಗಿದ್ದ ಮನೋಜ್ (21) ಹಾಗೂ ಎರಡು ಅನ್ಯಕೋಮಿನ ಯುವಕರ ನಡುವೆ ಗುರುವಾರ ರಾತ್ರಿ ನಗರದ ದುಬೈನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳದು ಘರ್ಷಣೆಯಾಗಿದೆ. ಈ ಸಂದರ್ಭ ಮತ್ತೊಂದು ಗುಂಪಿನ ಯುವಕರು ಮನೋಜ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಈ ವೇಳೆ ಮನೋಜ್ ಗಂಭೀರ ಗಾಯಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಆರೋಪಿ ಸಲೀಂ ಎಂಬಾತನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಹಿಂದೂಪರ ಕಾರ್ಯಕರ್ತರು ನಗರದ ಎಂ.ಜಿ ರಸ್ತೆಯಲ್ಲಿನ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿಸಿ ದಿಢೀರ್ ಪ್ರತಿಭಟನೆ ನಡೆಸಿದ್ದು, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭ ಪೊಲೀಸರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದಾರೆ.