ಬೆಂಗಳೂರು, ಏ 9(DaijiworldNews/MS): ಚಾಕು, ಪೇಪರ್ ಕಟ್ಟರ್, ರೇಜರ್, ನೈಲ್ ಕಟ್ಟರ್ ಹಾಗೂ ಇತರ ಹರಿದ ವಸ್ತುಗಳನ್ನು ಕಾಲಿನ ಮಣಿಗಂಟಿನ ಬಳಿ ಡಕ್ಟ್ ಟೇಪಿ ನಿಂದ ಸುತ್ತಿ ಅಡಗಿಸಿಕೊಂಡೀದ್ದ 26 ವರ್ಷದ ಗರ್ಭಿಣಿ ಪ್ರಯಾಣಿಕೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏ.೯ ರ ಗುರುವಾರ ಭದ್ರತಾ ಪಡೆ ಬಂಧಿಸಿದೆ.
ಬಂಧಿತಳನ್ನು ಅಸ್ಸಾಂ ಮೂಲದ ಉಮಾ ದೇವಿ ಎಂದು ಗುರುತಿಸಲಾಗಿದೆ. ಈಕೆ ಬೆಳಿಗ್ಗೆ 7.10 ಕ್ಕೆ ಬೆಂಗಳೂರಿನಿಂದ ಗುವಾಹಟಿಗೆ ಇಂಡಿಗೋ ವಿಮಾನ 6 ಇ 457 ಪ್ರಯಾಣಿಸಲು ಸಿದ್ದತೆ ನಡೆಸಿದ್ದಳು.
ದೇವಿ ಮತ್ತು ಆಕೆಯ ನಾಲ್ಕು ಕುಟುಂಬ ಸದಸ್ಯರು ಪ್ರಿಬೋರ್ಡಿಂಗ್ ಸೆಕ್ಯುರಿಟಿ ಚೆಕ್ ಆಪ್ ಗಾಗಿ ಮುಂಜಾನೆ ೫.೩೦ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಗರ್ಬಿಣಿಯ ನಡವಳಿಕೆ ಕಂಡು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಅಧಿಕಾರಿಯೊಬ್ಬರಿಗೆ , ಅನುಮಾನ ಬಂದು ತಪಾಸಣೆ ತೀವ್ರಗೊಳಿಸಿದಾಗ ಆಕೆಯ ಎಡಕಾಲಿನ ಪಾದದ ಬಳಿ ಹರಿತವಾದ ವಸ್ತುಗಳಾದ ಪೇಪರ್ ಕಟ್ಟರ್, ಚಾಕು ,ಸಿಂಗಲ್ ಬ್ಲೇಡ್, ರೇಜರ್, ನೇಲ್ಕ್ಲಿಪ್ಪರ್, ಮೆಟಲ್ ಫೈಲರ್ , ಇಕ್ಕಳ ಕಟ್ಟಿಕೊಂಡಿರುವುದು ಬೆಳಕಿಗೆ ಬಂದಿದೆ.
ಆಕೆಯನ್ನು ವಿಚಾರಣೆಗೊಳಪಡಿಸಿದಾಗ "ಚಿಕಿತ್ಸೆಗಾಗಿ ತಾನು ಬೆಂಗಳೂರಿಗೆ ಬಂದಿದ್ದು, ನಮ್ಮ ಸಮುದಾಯದಲ್ಲಿ ಗರ್ಭಿಣಿಯರು ಹೊಟ್ಟೆಯ ಸುತ್ತಲೂ ಲೋಹದ ವಸ್ತುಗಳನ್ನು ಕಟ್ಟುವುದು ಸಂಪ್ರದಾಯ" ಹೊಟ್ಟೆಯ ಭಾಗಕ್ಕೆ ಕಟ್ಟಲು ಆತಂಕವಾಗಿ ತನ್ನ ಪಾದದ ಬಳಿ ಕಟ್ಟಿಕೊಂಡಿರುವುದಾಗಿ ತಿಳಿಸಿದ್ದಾಳೆ. ತಪಾಸಣಾ ಅಧಿಕಾರಿಗಳು ತಕ್ಷಣ ಇಂಡಿಗೋ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಹೆಚ್ಚುವರಿ ಪರಿಶೀಲನೆಗಾಗಿ ವಿಮಾನದಲ್ಲಿ ಕುಳಿತಿದ್ದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಪತಿ ಸೇರಿದಂತೆ ಆಕೆಯ ಕುಟುಂಬಸ್ಥರು ಹಾಗೂ ಅವರ ಲಗೇಜ್ ಗಳನ್ನುವಿಮಾನದಿಂದ ಇಳಿಸಿದ್ದಾರೆ.
ಅನುಮಾನಕ್ಕೆ ಕಾರಣವಾದ ಸೀಟ್ ನಂಬರ್ :
ಶಂಕಿತೆ ಗರ್ಭಿಣಿಯೂ ವಿಮಾನದಲ್ಲಿ ಕಾಕ್ಪಿಟ್ಗೆ ಸಮೀಪವಿರುವ ಸೀಟ್ ನಂಬರ್ 1 ಎ ಬುಕ್ ಮಾಡಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಪೊಲೀಸರಿಗೆ ಹಸ್ತಾಂತರಿದ್ದು ಅವರು ಆಕೆಯನ್ನು ಹಾಗೂ ಆಕೆಯ ಸಮುದಾಯ ಪದ್ಧತಿಯ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.