ಕಲಬುರ್ಗಿ, ಏ. 09 (DaijiworldNews/HR): "ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಮುಖಂಡರೇ ಮುಂದೆ ನಿಂತು ಮತದಾರರಿಗೆ ಹಣ ಹಂಚುತ್ತಿದ್ದು, ಅವರ ವಾಮಮಾರ್ಗಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಚುನಾವಣಾ ಆಯೋಗವು ತಕ್ಷಣವೇ ಬಿಜೆಪಿ ಅಭ್ಯರ್ಥಿಯನ್ನು ಅನರ್ಹಗೊಳಿಸಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರು ಮತದಾರರಿಗೆ ಹಣ ಹಂಚುತ್ತಿರುವುದನ್ನು ಜನರೇ ಬಹಿರಂಗಗೊಳಿಸಿದ್ದು, ಇದನ್ನು ಆಧರಿಸಿ ಆ ಪಕ್ಷದ ಅಭ್ಯರ್ಥಿಯನ್ನು ಅನರ್ಹಗೊಳಿಸಲು ಕೋರಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು" ಎಂದರು.
"ಉಪ ಚುನಾವಣೆಗಳು ನಡೆಯುತ್ತಿರುವ ಎಲ್ಲ ಕಡೆಗಳಲ್ಲಿಯೂ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಸಿಬ್ಬಂದಿ ಕೂಡ ರಾಜ್ಯ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿರುವುದರಿಂದ ಬಹಿರಂಗವಾಗಿಯೇ ಇಂಥ ಅಕ್ರಮ ನಡೆಯುತ್ತಿದೆ"ಎಂದು ದೂರಿದ್ದಾರೆ.
ಇನ್ನು "ಉಪಚುನಾವಣೆಗಳು ಮುಗಿದ ಮೇಲೆ ರಾಜ್ಯ ಸರ್ಕಾರದ ಕಥೆಯೂ ಮುಗಿಯಲಿದ್ದು, ಇದನ್ನು ನಾನಲ್ಲ, ಬಿಜೆಪಿ ಶಾಸಕರು, ಮುಖಂಡರೇ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ" ಎಂದು ಹೇಳಿದ್ದಾರೆ.