ಬೆಳಗಾವಿ, ಎ.09 (DaijiworldNews/PY): "ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಪ್ರಶ್ನೆ ಕೇಳಬೇಡಿ. ನಾನು ಅವರ ಹೆಸರನ್ನು ತೆಗೆದುಕೊಳ್ಳುವುದಿಲ್ಲ" ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಶುಕ್ರವಾರ ಬೆಳಗಾವಿಯಲ್ಲಿ ಮಾತನಾಡಿದ ಅವರು, "ನಾನು ಯತ್ನಾಳ್ ಅವರ ಹೆಸರನ್ನು ತೆಗೆದುಕೊಳ್ಳುವುದಿಲ್ಲ.ಆ ವ್ಯಕ್ತಿಯ ಬಗ್ಗೆ ಮಾತನಾಡಿದರೆ ಆತನ ಪ್ರಸಿದ್ದಿ ಹೆಚ್ಚುತ್ತದೆ" ಎಂದಿದ್ದಾರೆ.
"ಯತ್ನಾಳ್ ಅವರ ಮೇಲೆ ಮಾಧ್ಯಮಗಳಿಗೆ ನಂಬಿಕೆ ಇರಬಹುದು. ಆದರೆ ಅವರ ಮೇಲೆ ಬಿಜೆಪಿಗೆ ಝೀರೋ ಝೀರೋ ಒನ್ ಪರ್ಸೆಂಟ್ ನಂಬಿಕೆ ಕೂಡಾ ಇಲ್ಲ. ಈಗಾಗಲೇ ಯತ್ನಾಳ್ ಅವರಿಗೆ ನೋಟಿಸ್ ನೀಡಲಾಗಿದ್ದು, ಶೀಘ್ರದಲ್ಲೇ ಹೊರಡಿಸಲಾಗುವುದು" ಎಂದು ತಿಳಿಸಿದ್ದಾರೆ.
ಯತ್ನಾಳ್ ಅವರನ್ನು ಪಕ್ಷದಿಂದ ಹೊರ ಹಾಕುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಪಕ್ಷದಿಂದ ಹೊರಹಾಕುವ ವ್ಯಕ್ತಿಯೇ ಇದ್ದಾರೆ. ಅವರನ್ನು ಹೊರ ಹಾಕಿದರೆ ಅವರು ಸ್ವತಂತ್ರರಾಗುತ್ತಾರೆ. ಪ್ರಸ್ತುತ ತಂತ್ರಗಳ ಬಗ್ಗೆ ಮಾಧ್ಯಮದ ಮುಂದೆ ಬಹಿರಂಗ ಪಡಿಸಲ್ಲ. ಇದರ ಹಿಂದೆ ಕೆಲವು ಕಾರಣಗಳೂ ಇವೆ" ಎಂದಿದ್ದಾರೆ.
"ಮೇ 2ರ ಬಳಿಕ ಸಿಎಂ ಬದಲಾಗುತ್ತಾರೆ" ಎಂದು ಇತ್ತೀಚೆಗೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದರು.