ಹುಬ್ಬಳ್ಳಿ, ಎ.09 (DaijiworldNews/PY): ಕಳೆದ ವರ್ಷ ಉಂಟಾದ ಭಾರಿ ಪ್ರವಾಹಕ್ಕೆ ಬಿದ್ದು ಹೋಗಿದ್ದ ಮನೆಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಸಲು ಬಂದ ಸಂದರ್ಭ ಕೇಂದ್ರ ಸಚಿವ ಮತ್ತು ಸ್ಥಳೀಯ ಸಂಸದ ಪ್ರಹ್ಲಾದ್ ಜೋಶಿ ಅವರ ಮನೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸಾವನ್ನಪ್ಪಿದ್ದಾಳೆ.
ಸಾಂದರ್ಭಿಕ ಚಿತ್ರ
"ಗರಗ ಗ್ರಾಮದಲ್ಲಿ ವಾಸಿಸುತ್ತಿರುವ ಮಹಿಳೆ ಶ್ರೀದೇವಿ ವೀರಪ್ಪ ಕಮ್ಮಾರ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ವರ್ಷ ಉಂಟಾದ ಭಾರಿ ಪ್ರವಾಹದಿಂದಾಗಿ ಮಹಿಳೆಯ ಮನೆಯು ಕುಸಿದು ಬಿದ್ದಿದ್ದು ಸರ್ಕಾರದಿಂದ 50,000 ರೂ. ಮಾತ್ರ ಪರಿಹಾರ ಲಭಿಸಿದೆ. ಈ ಹಣದಲ್ಲಿ ರಿಪೇರಿಯನ್ನೂ ಕೂಡಾ ಸರಿಯಾಗಿ ಮಾಡಲಾಗದ ಕಾರಣ ಮಹಿಳೆ ಹೆಚ್ಚಿನ ಪರಿಹಾರವನ್ನು ಕೋರಿ ಸಂಸದ ಜೋಶಿ ಮತ್ತು ಧಾರವಾಡ ಗ್ರಾಮೀಣ ಶಾಸಕ ಅಮೃತ್ ದೇಸಾಯಿ ಅವರನ್ನು ಭೇಟಿಯಾಗಲು ಹಲವು ಬಾರಿ ಪ್ರಯತ್ನಿಸಿದ್ದರು. ಆದರೆ ಮಹಿಳೆಗೆ ಸಚಿವರನ್ನು ಭೇಟಿಯಾಗಲು ಅವಕಾಶ ದೊರೆಯದ ಕಾರಣ ನೊಂದು ಕೇಂದ್ರ ಸಚಿವರ ಮನೆಯ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು.
ಇನ್ನು ಮಹಿಳೆ ವಿಷ ಸೇವಿಸುವ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಇದರಲ್ಲಿ ''ಕಳೆದ 5-6 ತಿಂಗಳುಗಳಿಂದ ನಾನು ಎಷ್ಟು ಪ್ರಯತ್ನಿಸಿದರೂ ಸಂಸದರನ್ನು ಭೇಟಿಯಾಗಲು ಆಗಲಿಲ್ಲ. ಶಾಸಕ ಅಮೃತ್ ದೇಸಾಯಿ ಅವರನ್ನು ಭೇಟಿಯಾದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡದೆ, ಸಂಸದರನ್ನು ಭೇಟಿ ಮಾಡುವಂತೆ ಹೇಳಿದ್ದರು'' ಎಂದು ಉಲ್ಲೇಖಿಸಲಾಗಿತ್ತು.