ನವದೆಹಲಿ, ಏ. 09 (DaijiworldNews/HR): "ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸುವುದಕ್ಕಾಗಿ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ಒಂದನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದ್ದು, 18 ವರ್ಷ ದಾಟಿದವರಿಗೆ ತಾವು ಬಯಸಿದ ಧರ್ಮವನ್ನು ಅನುಸರಿಸುವ ಆಯ್ಕೆ ಮಾಡುವುದನ್ನು ತಡೆಯಲು ಅವರಕಾಶವಿಲ್ಲ" ಎಂದು ಹೇಳಿದೆ.
ಕಾನೂನು ಆಯೋಗಕ್ಕೆ ಪ್ರಾತಿನಿಧಿತ್ವ ಸಲ್ಲಿಸುವುದಕ್ಕಾಗಿ ಅರ್ಜಿದಾರರಿಗೆ ಅನುಮತಿ ನೀಡಲು ಕೂಡ ಸುಪ್ರೀಂಕೋರ್ಟ್ ನಿರಾಕರಿಸಿದ್ದು, "ನಾವು ನಿಮಗೆ ಅನುಮತಿ ನೀಡಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಪ್ರಸರಣ ಪದವು ಏಕೆ ಇದೆ ಎಂಬುದಕ್ಕೆ ಕಾರಣವಿದೆ" ಎಂದು ನ್ಯಾಯಮೂರ್ತಿ ಆರ್ಎಫ್ ನಾರಿಮನ್ ಹೇಳಿದ್ದಾರೆ.
ಇನ್ನು ಧಾರ್ಮಿಕ ಮತಾಂತರ ಮತ್ತು ಮಂತ್ರವಾದಗಳನ್ನು ನಿಷೇಧಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಈ ಪಿಐಎಲ್ -ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಅಲ್ಲ, ಬದಲಾಗಿ ಪಬ್ಲಿಸಿಟಿ ಇಂಟರೆಸ್ಟ್ ಲಿಟಗೇಷನ್ ಎಂದು ನ್ಯಾಯಾಲಯ ವ್ಯಾಖ್ಯಾನಿಸಿದೆ.
ಮಾಟಮಂತ್ರ, ಪವಾಡ, ವಿಶೇಷ ಶಕ್ತಿಗಳನ್ನು ಬಳಸಿಕೊಂಡು ಅಥವಾ ವ್ಯಕ್ತಿಗಳಿಗೆ ಹಣಕಾಸಿನ ಸಹಾಯ ಅಥವಾ ಉಡುಗೊರೆಯ ಪ್ರಲೋಭನೆಗಳನ್ನು ಬಳಸಿಕೊಳ್ಳುವ ಮೂಲಕ ಅಥವಾ ಬೆದರಿಕೆ, ಪ್ರಚೋದನೆಗಳ ಮೂಲಕ ಧಾರ್ಮಿಕ ಮತಾಂತರ ಮಾಡುವುದನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಇದನ್ನು ನ್ಯಾಯಮೂರ್ತಿಗಳಾದ ಆರ್ಎಫ್ ನಾರಿಮನ್, ಬಿಆರ್ ಗವಾಯ್ ಮತ್ತು ಹೃಷಿಕೇಶ್ ರಾಯ್ ಅವರನ್ನು ಒಳಗೊಂಡ ನ್ಯಾಯಪೀಠ ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.