ಬೆಂಗಳೂರು, ಎ.09 (DaijiworldNews/PY): "ಪ್ರಸ್ತುತ ಪರಿಸ್ಥಿತಿಯ ಸಂದರ್ಭ ಸಾರಿಗೆ ನೌಕರರ ಆರನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಮೇಲೂ ಹಠ ಸಾಧಿಸುವುದು ಸರಿಯಲ್ಲ. ಹಠ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಾರಿಗೆ ನೌಕರರಲ್ಲಿ ಮನವಿ ಮಾಡಿದ್ದಾರೆ.
ಶುಕ್ರವಾರ ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಂದಿನಿಂದ ಬಸ್ಗಳನ್ನು ಓಡಾಡಿಸೋಕೆ ಪ್ರಾರಂಭಿಸಿ. ಸಾರ್ವಜನಿಕರಿಗೆ ಯಾವುದೇ ರೀತಿಯಾದ ತೊಂದರೆ ಆಗದಂತೆ ನಡೆದುಕೊಳ್ಳಿ. ಸಾರ್ವಜನಿರು ಕೊರೊನಾ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವಗ ಈ ರೀತಿ ಹಠ ಮುಂದುವರಿಸುವುದು ಸರಿಯಲ್ಲ. ಈ ಬಗ್ಗೆ ನೀವೆ ಯೋಚನೆ ಮಾಡಿ. ಹಠ ಬಿಟ್ಟು ಕರ್ತವ್ಯಕ್ಕೆ ಬನ್ನಿ" ಎಂದಿದ್ದಾರೆ.
"ಸಾರಿಗೆ ನೌಕರರು ಯಾವುದೇ ಕಾರಣಕ್ಕೂ ಹಠ ಮುಂದುವರಿಸಬಾರದು.ಈಗಾಗಲೇ 9 ಬೇಡಿಕೆಗಳ ಪೈಕಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಇದರಲ್ಲಿ ಲೋಪವಿದ್ದರೆ ಹೇಳಿ ಸರಿಪಡಿಸೋಣ. ಆದಾಯದಲ್ಲಿ ಶೇ.85ರಷ್ಟು ಭಾಗ ಸರ್ಕಾರಿ ನೌಕರರ ಪಿಂಚಣಿ, ವೇತನ ಸೇರಿದಂತೆ ಇತರ ಯೋಜನೆಗಳಗೆ ವ್ಯಯವಾಗುತ್ತಿದೆ. ಯಾರದೋ ಮಾತನ್ನು ಕೇಳಿ ಹಠ ಮಾಡುವುದು ಸೂಕ್ತವಲ್ಲ" ಎಂದು ತಿಳಿಸಿದ್ದಾರೆ.