ಬೆಳಗಾವಿ, ಏ. 09 (DaijiworldNews/HR): "ಕೊರೊನಾ ಹೆಸರಿನಲ್ಲಿ ದೊಡ್ಡ ಮಟ್ಟ ಭ್ರಷ್ಟಾಚಾರ ನಡೆದಿದ್ದು, 16 ಸಾವಿರ ಕೋಟಿ ಖರ್ಚಿನ ಬಗ್ಗೆ ಮಾಹಿತಿ ನೀಡಿ, 20 ಲಕ್ಷ ಕೋಟಿ ಪ್ಯಾಕೇಜ್ ನಲ್ಲಿ ಯಾರಿಗೆ ಎಷ್ಟು ಸಿಕ್ಕಿದೆ ಎನ್ನುವುದನ್ನು ರಾಜ್ಯ ಸರ್ಕಾರ ತಿಳಿಸಲಿ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿರೋಧ ಪಕ್ಷದವರನ್ನು ಕರೆದು ಸಭೆ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಈಗ ಸರ್ವ ಪಕ್ಷ ಸಭೆ ಕರೆಯುವ ಅಗತ್ಯವೇನಿದೆ? ಕೊರೊನಾ ಸಂದರ್ಭದಲ್ಲಿ ದೇಶದ ಇತಿಹಾಸದಲ್ಲೇ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಮಾಡಬಾರದ್ದು ಮಾಡಿ ದೇಶಕ್ಕೆ, ರಾಜ್ಯಕ್ಕೆ ಅನ್ಯಾಯ ಎಸಗಿದ್ದಾರೆ. ಈಗ ಸಭೆ ಕರೆಯುತ್ತೇವೆ ಎನ್ನುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಸರ್ಕಾರ ನಡೆಸುತ್ತಿದ್ದಾರೆ" ಎಂದರು.
ಇನ್ನು ಕೊರೊನಾ ಕಾಣಿಸಿಕೊಂಡಾಗ ದೀಪ ಬೆಳಗಿ, ಜಾಗಟೆ ಬಾರಿಸಿರಿ ಎಂದಿದ್ದರು, ಅವೆಲ್ಲವನ್ನೂ ಜನರು ನಿಷ್ಠೆಯಿಂದ ಮಾಡಿದ್ದಾಯಿತು. ಈಗ 2ನೇ ಅಲೆ ಬಂದಿದ್ದು, ಕೊರೊನಾ ನಿಯಂತ್ರಣದಲ್ಲಿ ಸರ್ಕಾರಗಳು ವಿಫಲವಾಗಿವೆ. ಈಗ ಕರ್ಫ್ಯೂ ಜಾರಿ ಮಾಡುತ್ತಿದ್ದಾರೆ. ನೈಟ್ ಕರ್ಫ್ಯೂ ಜಾರಿಯಿಂದ ಏನೂ ಪ್ರಯೋಜನ ಆಗುವುದಿಲ್ಲ" ಎಂದು ಹೇಳಿದ್ದಾರೆ.