ಮಡಿಕೇರಿ, ಎ.09 (DaijiworldNews/PY): ಮೆಟ್ರಿಕ್ ನಂತರದ ಬಾಲಕಿಯರ ವೃತ್ತಿಪರ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರ ಅಸಭ್ಯವಾಗಿ ವರ್ತಿಸುತ್ತಿದ್ದ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿರುವ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿರುವ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎಸ್.ಟಿ ಮಲ್ಲಿಕಾರ್ಜುನ್ ಅವರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಇವರು ಆಗ್ಗಾಗೆ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ ನೀಡುವುದು, ನಿಲಯದ ಶೌಚಾಲಯಗಳನ್ನು ಬಳಸುವುದು ಅಲ್ಲದೇ, ವಿದ್ಯಾರ್ಥಿನಿಯರು ಮಲಗಿದ್ದ ಸಂದರ್ಭ ಏಕಾಏಕಿ ಕೋಣೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುವ ಬಗ್ಗೆ ಟೀಕೆ ವ್ಯಕ್ತಪಡಿಸಿ, ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ವಿಚಾರದ ಬಗ್ಗೆ ಅನೇಕ ಬಾರಿ ಮಲ್ಲಿಕಾರ್ಜುನ್ ಅವರಿಗೆ ಹಿರಿಯ ಅಧಿಕಾರಿಗಳು ಮೌಖಿಕವಾಗಿ ಬುದ್ದಿವಾದ ಹೇಳಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ.
ಇದರಿಂದ ನೊಂದ ವಿದ್ಯಾರ್ಥಿನಿಯರು ಈ ವಿಚಾರದ ಬಗ್ಗೆ ಸ್ಥಳೀಯ ಪೊನ್ನಂಪೇಟೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಸಾಜಿ ಅಚ್ಚುತ್ತನ್ ಅವರಿಗೆ ಲಿಖಿತ ಪತ್ರ ಬರೆದಿದ್ದರು. ಪತ್ರದ ಆಧಾರದ ಮೇಲೆ ಶ್ರೀಜಾ ಸಾಜಿ ಅಚ್ಚುತ್ತನ್ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ್ದು, ಆ ಸಂದರ್ಭ ಸಮಸ್ಯೆಯ ಬಗ್ಗೆ ತಿಳಿದುಬಂದಿದೆ. ಬಳಿಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬೆಂಗಳೂರಿನ ಆಯುಕ್ತರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ಜಿ.ಪಂ ಸದಸ್ಯರ ಪತ್ರಕ್ಕೆ ಮನ್ನಣೆ ನೀಡಿರುವ ಆಯುಕ್ತರು, ಅಧಿಕಾರಿಯ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ಇದರ ಆಧಾರದ ಮೇಲೆ ವಿದ್ಯಾರ್ಥಿ ನಿಲಯದಲ್ಲಿ ಅಸಭ್ಯ ವರ್ತನೆ, ನಿಲಯಗಳ ಸುಗಮ ನಿರ್ವಹಣೆಯಲ್ಲಿ ವಿಫಲತೆ, ಕರ್ತವ್ಯ ನಿರ್ಲಕ್ಷ್ಯತೆ, ಬೇಜವಾಬ್ದಾರಿತನ ಹಿನ್ನೆಲೆ ತಾಲೂಕು ಅಧಿಕಾರಿ ಮಲ್ಲಿಕಾರ್ಜುನ್ ಅವರನ್ನು ಆಯುಕ್ತರು ಸೇವೆಯಿಂದ ಅಮಾನತಗೊಳಿಸಿ ಆದೇಶ ನೀಡಿದ್ದಾರೆ.