ಬೆಂಗಳೂರು, ಎ.09 (DaijiworldNews/PY): ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ನಿಗದಿತ ಪಾಸ್ ಇದ್ದರೂ ಎರಡು ದಿನಗಳಿಂದ ಬಸ್ ಸೇವೆ ಒದಗಿಸಲು ವಿಫಲವಾದ ಕಾರಣ ವಿದ್ಯಾರ್ಥಿನಿಯೋರ್ವಳು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ವಕೀಲರ ಮೂಲಕ ನೋಟಿಸ್ ನೀಡಿದ್ದಾರೆ.
ಕೆಂಗೇರಿಯ ಜೆಎಸ್ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ನ ಬಿಇ ಮೊದಲ ಸೆಮಿಸ್ಟರ್ ವಿದ್ಯಾರ್ಥಿನಿ, ತುಮಕೂರು ಮೂಲದ ಜಿ.ಪಾವನಾ ಅವರು 10 ಲಕ್ಷ. ರೂ. ಪರಿಹಾರ ನೀಡುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ವಕೀಲರ ಮೂಲಕ ನೋಟಿಸ್ ನೀಡಿದ್ದಾರೆ.
"ಬಿಎಂಟಿಸಿ ಎಂಡಿ ಹಾಗೂ ಮುಷ್ಕರಕ್ಕೆ ಕರೆ ನೀಡಿರುವ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನಷ್ಟಕ್ಕೆ ಪರಿಹಾರ ನೀಡಬೇಕು" ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮುಷ್ಕರದ ಹಿನ್ನೆಲೆ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಸಾರಿಗೆ ಬಸ್ಗಳಿಲ್ಲದೇ ಪ್ರಯಾಣಿಕರು ಪರದಾಡುವ ಸ್ಥಿತಿ ಉಂಟಾಗಿದೆ.
ಇನ್ನು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲು ಮುಂದಾಗಿರುವ ಸರ್ಕಾರ 2 ವರ್ಷಗಳ ಹಿಂದೆ ನಿವೃತ್ತರಾದ ಸಾರಿಗೆ ನೌಕರರನ್ನು ಪುನಃ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.