ನವದೆಹಲಿ, ಎ.08 (DaijiworldNews/MB) : ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಈಗಾಗಲೇ ಆರಂಭವಾಗಿ ಹಲವು ಮಂದಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಆದರೆ ಈವರೆಗೂ ಕಾಂಗ್ರೆಸ್ ನಾಯಕರುಗಳಾದ ಲಸಿಕೆ ಸೋನಿಯಾ, ರಾಹುಲ್, ಪ್ರಿಯಾಂಕ ಗಾಂಧಿ ಅವರು ಲಸಿಕೆ ಸ್ವೀಕರಿಸಿಲ್ಲ. ಈ ವಿಚಾರದಲ್ಲೇ ಕಾಂಗ್ರೆಸ್ ಮುಖಂಡರ ಕಾಲೆಳೆದಿರುವ ಬಿಜೆಪಿ, ''ಗಾಂಧಿ ಕುಟುಂಬದ ಯಾರೂ ಲಸಿಕೆ ತೆಗೆದುಕೊಂಡಿಲ್ಲವೇಕೆ? ಇಟಲಿಯ ಲಸಿಕೆಗಾಗಿ ಗಾಂಧಿ ಕುಟುಂಬ ಕಾಯುತ್ತಿದೆಯೇ?'' ಎಂದು ಪ್ರಶ್ನಿಸಿದೆ.
ಬುಧವಾರ ಕೊರೊನಾ ಲಸಿಕೆ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ''ಅಗತ್ಯವಿರುವುದು ಹಾಗೂ ಬಯಕೆಯ ಬಗ್ಗೆ ಚರ್ಚಿಸುವುದು ಹಾಸ್ಯಾಸ್ಪದವಾಗಿದೆ. ಪ್ರತಿಯೊಬ್ಬ ಭಾರತೀಯನು ಸುರಕ್ಷಿತ ಜೀವನಕ್ಕೆ ಅರ್ಹನಾಗಿದ್ದಾನೆ'' ಎಂದು ಕೊರೊನಾ ಲಸಿಕೆಯ ಬಗ್ಗೆ ಹೇಳಿದ್ದರು. ಹಾಗೆಯೇ ದೇಶದಲ್ಲಿ ಲಸಿಕೆ ಕೊರತೆ ಉಂಟಾಗಿದೆ ಎಂದು ಹೇಳಲಾಗಿದೆ.
ಗುರುವಾರ ಕಾಂಗ್ರೆಸ್ ನಾಯಕರ ಬಗ್ಗೆ ಟೀಕೆ ಮಾಡಿ ಟ್ವೀಟ್ ಮಾಡಿರುವ ಬಿಜೆಪಿ, ''ಲಸಿಕೆ ತೆಗೆದುಕೊಳ್ಳದೆ ಕಾಂಗ್ರೆಸ್ ಪಕ್ಷಕ್ಕೆ ಮತಿಭ್ರಮಣೆಯಾಗಿದೆ. ಮೋದಿ ಸರ್ಕಾರ ದೇಶದಲ್ಲಿ ನಿತ್ಯ 34 ಲಕ್ಷ ಡೋಸ್ ಲಸಿಕೆ ವಿತರಿಸುತ್ತಿದೆ. ಇದುವರೆಗೆ 9 ಕೋಟಿಗೂ ಅಧಿಕ ಲಸಿಕೆ ವಿತರಿಸಲಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಲಸಿಕೆ ಕೊರತೆ ನಿಜವಾಗಿದ್ದರೆ ಸಿದ್ದರಾಮಯ್ಯ ಲಸಿಕೆ ಪಡೆಯಲು ಸಾಧ್ಯವಿತ್ತೇ?'' ಎಂದು ಕೇಳಿದ್ದಾರೆ.
''ಲಸಿಕೆಯ ಬಗ್ಗೆ ಆತ್ಮವಿಶ್ವಾಸ ಮೂಡಿಸುವ ಬದಲು ದೇಶದ ಜನರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಗಾಂಧಿ ಕುಟುಂಬದ ಯಾರೂ ಲಸಿಕೆ ತೆಗೆದುಕೊಂಡಿಲ್ಲವೇಕೆ? ಭಾರತೀಯ ಲಸಿಕೆಯಲ್ಲಿ ಸೋನಿಯಾ, ರಾಹುಲ್, ಪ್ರಿಯಾಂಕ ಗಾಂಧಿ ಅವರಿಗೆ ನಂಬಿಕೆ ಇಲ್ಲವೇ? ಇಟಲಿಯ ಲಸಿಕೆಗಾಗಿ ಗಾಂಧಿ ಕುಟುಂಬ ಕಾಯುತ್ತಿದೆಯೇ?'' ಎಂದು ಪ್ರಶ್ನಿಸಿದ್ದಾರೆ.