ಬೆಂಗಳೂರು, ಎ.08 (DaijiworldNews/PY): "ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತದಲ್ಲಿ ಕಮಿಷನ್ ದಂಧೆ ಭರ್ಜರಿಯಾಗಿ ನಡೆಯುತ್ತಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, "ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತದಲ್ಲಿ ಕಮಿಷನ್ ದಂಧೆ ಭರ್ಜರಿಯಾಗಿ ನಡೆಯುತ್ತಿದೆ. ಕಮಿಷನ್ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರೊಂದಿಗೆ ಜಗಳವಾಡಿಕೊಂಡ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ" ಎಂದಿದ್ದಾರೆ.
"ಈಶ್ವರಪ್ಪ ಅವರ ಗಮನಕ್ಕೆ ತಾರದೆ ಅವರ ಇಲಾಖೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕಮಿಷನ್ ಹೊಡೆಯುವ ವಿಷಯದಲ್ಲಿ ವಿಜಯೇಂದ್ರ ಮತ್ತು ಈಶ್ವರಪ್ಪ ನಡುವೆ ಜಗಳವಾಗಿದೆ. ಬಿಜೆಪಿ ಅವರ ಭ್ರಷ್ಟ ಆಡಳಿತದಲ್ಲಿ ಕಮಿಷನ್ ದಂಧೆ 30-35 ಪರ್ಸೆಂಟ್ ಗಡಿ ದಾಟಿದೆ" ಎಂದು ಆರೋಪಿಸಿದ್ದಾರೆ.
"ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಿದ ಬಿಜೆಪಿ ಸರ್ಕಾರ, ಅಭಿವೃದ್ಧಿ ಕಾಮಗಾರಿಗಳಿಗೆ ಈವರೆಗೆ ನಯಾಪೈಸೆ ಖರ್ಚು ಮಾಡಿಲ್ಲ. ಈ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಹಣ ಖರ್ಚು ಮಾಡಿದ್ದರೆ ಲೆಕ್ಕ ಹೇಳಲಿ" ಎಂದು ಒತ್ತಾಯಿಸಿದ್ದಾರೆ.
"ಯಡಿಯೂರಪ್ಪ ಅವರನ್ನು ಟೀಕಿಸಿದ್ದಕ್ಕಾಗಿ ಕೆಲ ಸಚಿವರು ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಅವರು ದಿನಬೆಳಗಾದರೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಟೀಕೆ ಮಾಡುತ್ತಾರೆ. ರಾಜ್ಯ ಸರ್ಕಾರದ ಸಚಿವರಿಗೆ ಧೈರ್ಯವಿದ್ದರೆ ಮೊದಲು ಯತ್ನಾಳ್ ಅವರ ಬಾಯಿ ಮುಚ್ಚಿಸಲಿ" ಎಂದು ಕಿಡಿಕಾರಿದ್ದಾರೆ.