ಮುಂಬೈ, ಏ. 08 (DaijiworldNews/HR): ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರು ತಮ್ಮ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿರುವ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಂಗಳವಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ದೇಶಮುಖ್ ಅವರ ಅರ್ಜಿಯನ್ನು ವಜಾಗೊಳಿಸಿದೆ.
ಬಾಂಬೆ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಈ ಗಂಭೀರ ಪ್ರಕರಣದಲ್ಲಿ ಸ್ವತಂತ್ರ ತನಿಖೆಯ ಅಗತ್ಯವಿದೆ ಎಂದು ಹೇಳಿದೆ.
ಮುಂಬೈ ನಗರದ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು 100 ಕೋಟಿ ರೂಪಾಯಿ ಲಂಚ ವಸೂಲಿ ಆರೋಪವನ್ನು ಅನಿಲ್ ದೇಶಮುಖ್ ಅವರ ಮೇಲೆ ಮಾಡಿದ್ದು, ಇದರಿಂದ ತೀವ್ರ ಮುಜಗರಕ್ಕೆ ಒಳಗಾಗಿದ್ದ ಅನಿಲ್ ದೇಶಮುಖ್ ಅವರ ರಾಜೀನಾಮೆಗೆ ಪ್ರತಿ ಪಕ್ಷಗಳು ಆಗ್ರಹಿಸಿದ್ದವು. ಅಲ್ಲದೇ ಪರಮ್ ಬೀರ್ ಸಿಂಗ್ ಲಂಚದ ಆರೋಪದ ಕುರಿತಂತೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಪರಿಗಣಿಸಿದ್ದ ಬಾಂಬೆ ಹೈಕೋರ್ಟ್ ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಇದರಿಂದ ಅನಿವಾರ್ಯವಾಗಿ ದೇಶಮುಖ್ ಸೋಮವಾರ ರಾಜೀನಾಮೆ ನೀಡಿದ್ದರು. ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ಇನ್ನು ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವೂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಆರು ಅಧಿಕಾರಿಗಳನ್ನೊಳಗೊಂಡ ಸಿಬಿಐ ತಂಡ ಈ ಪ್ರಕರಣದ ಪ್ರಾಥಮಿಕ ತನಿಖೆ ಮಾಡಲು ಮುಂಬೈಗೆ ಆಗಮಿಸಿತ್ತು ಎನ್ನಲಾಗಿದೆ.