ಮುಂಬೈ, ಎ.08 (DaijiworldNews/PY): ಕೇಂದ್ರ ಸರ್ಕಾರವು, ಕೊರೊನಾ ವೈರಸ್ ಲಸಿಕೆಗಳ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಆರೋಪಿಸಿದ್ದು, "ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಲಸಿಕೆಗಳನ್ನು ಕಳುಹಿಸುತ್ತಿದ್ದು, ಮಲತಾಯಿ ಧೋರಣೆ ಪ್ರದರ್ಶನ ಮಾಡುತ್ತಿದೆ" ಎಂದಿದ್ದಾರೆ.
ಸಾಂದರ್ಭಿಕ ಚಿತ್ರ
ದೇಶದಲ್ಲಿಯೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾದ ಮಹಾರಾಷ್ಟ್ರದಲ್ಲಿ ಕೊರೊನಾ ಲಸಿಕೆಗಳ ಕೊರತೆ ಉಂಟಾಗಿದೆ ಎಂದು ರಾಜೇಶ್ ತೋಪೆ ತಿಳಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, "ಕೊರೊನಾ ಲಸಿಕೆಗಳ ಕೊರತೆ ಇಲ್ಲ" ಎಂದಿದ್ದರು.
"ಹೆಚ್ಚುವರಿ ಕೊರೊನಾ ಲಸಿಕೆ ಸಂಗ್ರಹವಿದ ಎನ್ನುವ ಮಾಹಿತಿ ನಮಗೆ ಈಗಷ್ಟೇ ಬಂದಿದೆ. ನಮ್ಮ ಬಳಿ ಈಗ 17 ಲಕ್ಷ ಡೋಸ್ ಇದ್ದು, ನಾವು ಮಾಡಿರುವ 40 ಲಕ್ಷ ಡೋಸ್ ಲಸಿಕೆಗೆ ಹೋಲಿಕೆ ಮಾಡಿದರೆ ಇದು ಕಡಿಮೆ" ಎಂದು ರಾಜೇಶ್ ತೋಪೆ ತಿಳಿಸಿದ್ದಾರೆ.
"ಮಹಾರಾಷ್ಟ್ರದಲ್ಲಿ ಕೊರೊನಾ ಲಸಿಕೆ ಕೊರತೆ ಉಂಟಾಗಿದ್ದು, ಅನೇಕ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಸಂಗ್ರಹ ಖಾಲಿಯಾಗಿದೆ. ಎಲ್ಲಾ ಡೋಸ್ಗಳು ಇನ್ನು ಮೂರು ದಿನಗಳಲ್ಲಿ ಖಾಲಿಯಾಗಲಿವೆ. ನಮಗೆ ಪ್ರತಿ ವಾರ 40 ಲಕ್ಷ ಡೋಸ್ ಲಸಿಕೆಯ ಅಗತ್ಯವಿದೆ" ಎಂದಿದ್ದಾರೆ.
"ಪ್ರತಿ ವಾರ ಮಧ್ಯಪ್ರದೇಶಕ್ಕೆ 40 ಲಕ್ಷ ಡೋಸ್, ಉತ್ತರ ಪ್ರದೇಶಕ್ಕೆ 48 ಲಕ್ಷ ಡೋಸ್, ಹರಿಯಾಣಕ್ಕೆ 24 ಲಕ್ಷ ಡೋಸ್ ಹಾಗೂ ಗುಜರಾತ್ಗೆ 30 ಲಕ್ಷ ಡೋಸ್ಗಳನ್ನು ರವಾನಿಸಲಾಗುತ್ತಿದೆ. ಗುಜರಾತ್ನಲ್ಲಿ ಆರು ಕೋಟಿ ಜನಸಂಖ್ಯೆ ಇದ್ದು, ಅಲ್ಲಿಗೆ ಒಂದು ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಆದರೆ, ನಮ್ಮಲ್ಲಿ 12 ಕೋಟಿ ಜನಸಂಖ್ಯೆ ಇದ್ದು, ನಮಗೆ 1.04 ಕೋಟಿ ಡೋಸ್ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.